ಉದಯವಾಹಿನಿ, ಪಾಟ್ನಾ: ವಿಧಾನಸಭೆ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಾಗಲೇ ಬಿಹಾರದ ಮಹಿಳೆಯರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ _ ಅವರಿಂದು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.ಈ ಯೋಜನೆಯ ಮೂಲಕ ಬಿಹಾರದಾದ್ಯಂತ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಇದಕ್ಕಾಗಿ ಒಟ್ಟು 7,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.
ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಅವರ ಆಯ್ಕೆಯ ಜೀವನೋಪಾಯ ಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಕೃಷಿ, ಪಶುಸಂಗೋಪನೆ, ಕರಕುಶಲ ವಸ್ತುಗಳು, ಟೈಲರಿಂಗ್, ನೇಯ್ಗೆ ಮತ್ತು ಇತರ ಸಣ್ಣ-ಪ್ರಮಾಣದ ಉದ್ಯಮಗಳನ್ನು ಮಹಿಳೆಯರು ನಡೆಸಬಹುದು, ನಂತರದ ಹಂತಗಳಲ್ಲಿ 2 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ನೆರವು ದೊರೆಯುವ ಸಾಧ್ಯತೆ ಇದೆ.
