ಉದಯವಾಹಿನಿ, ನವದೆಹಲಿ: ರಾಜಸ್ಥಾನದ ಬನ್ಸವಾರಾದಲ್ಲಿ 421000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 2,800 ಮೆಗಾವ್ಯಾಟ್ ಸಾಮರ್ಥ್ಯದ `ಮಹಿ ಬನ್ಸವಾರಾ ಪರಮಾಣು ವಿದ್ಯುತ್’ ಯೋಜನೆ ಸೇರಿದಂತೆ ನವೀಕರಿಸಬಹುದಾದ ಇಂಧನ, ನೀರು ಸರಬರಾಜು, ರಸ್ತೆ ಮತ್ತು ಮೂಲಸೌಕರ್ಯಗಳ ಒಟ್ಟಾರೆ 1,22,100 ಕೋಟಿ ರೂ. ವೆಚ್ಚದ ಹಲವು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ರಾಜಸ್ಥಾನ ರಾಜ್ಯಪಾಲ ಹರಿಭಾವು ಬಗಾಡೆ, ಸಿಎಂ ಭಜನ್‌ಲಾಲ್ ಶರ್ಮಾ ಮತ್ತಿತರರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಸೆ.25) ರಿಮೋಟ್ ಬಟನ್ ಒತ್ತುವ ಮೂಲಕ ಲಕ್ಷಕ್ಕೂ ಅಧಿಕ ಕೋಟಿ ವೆಚ್ಚದ ಅನೇಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ದೇಶಾಭಿವೃದ್ಧಿಯ ಮತ್ತೊಂದು ಪರ್ವಕ್ಕೆ ನಾಂದಿ ಹಾಡಿದರು.
ಬನ್ಸವಾರಾದಲ್ಲಿ 42,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 2,800 ಮೆಗಾವ್ಯಾಟ್ ಸಾಮರ್ಥ್ಯ-ಸೌಲಭ್ಯದ ಮಹಿ-ಬನ್ಸವಾರಾ ಪರಮಾಣು ವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಮೋದಿ, `ಇಂಧನ ಸ್ವಾವಲಂಭನೆಯತ್ತ ಭಾರತ ಇರಿಸಿದ ಸದೃಢ ಹೆಜ್ಜೆ’ಯನ್ನು ಪ್ರತಿಪಾದಿಸಿದರು.
