ಉದಯವಾಹಿನಿ, ಹೀರೆಕಾಯಿ, ಸೋರೆಕಾಯಿ, ಗೋರಿಕಾಯಿ ಮುಂತಾದ ಹತ್ತು ಹಲವು ದೇಸಿ ತರ ಕಾರಿ ಗಳು ಭಾರತೀಯ ಅಡುಗೆಗಳ ರುಚಿ, ಘಮ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತಿವೆ. ಸಮೀಪದ ಯಾವುದೇ ತರಕಾರಿ ಅಂಗಡಿಗಳಲ್ಲಿ ಲಭ್ಯವಾಗುವ ಇವು ಗ್ರಾಹಕರ ಇಷ್ಟದ ಆನ್‌ ಲೈನ್‌ ಆರ್ಡರ್‌ ಗಳ ಮೂಲಕವೂ ಮನೆ ಬಾಗಿಲು ತಲುಪುತ್ತವೆ. ಹೀರೆಕಾಯಿಯ ಉದಾಹರಣೆ ಯನ್ನೇ ತೆಗೆದುಕೊಂಡರೆ, ತೊವ್ವೆ, ಗೊಜ್ಜು, ಪಲ್ಯ, ಕೂಟುಗಳಿಂದ ಹಿಡಿದು, ಹೀರೆ ಸಿಪ್ಪೆಯ ಚಟ್ನಿ, ಹೀರೆಕಾಯಿ ಬೋಂಡಾ ಸೇರಿದಂತೆ ಬಗೆಬಗೆಯ ವ್ಯಂಜನಗಳಿಗೆ ಒದಗಿ ಬರುವ ಈ ತರಕಾರಿ ಪಾಕ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಇದರ ರುಚಿ, ಘಮಗಳು ಬರೀ ಜಿಹ್ವೆಯನ್ನು ತಣಿಸಿದರೆ ಸಾಕೇ? ತಿಂದಿದ್ದಕ್ಕೆ ಆರೋಗ್ಯಕ್ಕೂ ಏನಾದರೂ ಲಾಭವಾಗಬೇಕಲ್ಲ. ಅಂಥ ಸದ್ಗುಣಗಳು ಏನಿವೆ ಹೀರೆ ಕಾಯಿಯಲ್ಲಿ? ಆರೋಗ್ಯಕರ ಅಂಶಗಳು ಬಹಳಷ್ಟಿವೆ ಹೀರೆಕಾಯಿಯಲ್ಲಿ. ಹಲವಾರು ರೀತಿಯ ಖನಿಜಗಳು, ಸೂಕ್ಷ್ಮ ಪೋಷ ಕಾಂಶಗಳು, ನಾರು ಸೇರಿದಂತೆ ಹಲವಾರು ಸತ್ವಗಳು ಹೀರೆಕಾಯಿ ತಿನ್ನುವುದರಿಂದ ದೊರೆಯುತ್ತದೆ. ಏನೇನಿವೆ ಇದರಲ್ಲಿ ಎಂದು ನೋಡಿದರೆ-
ವಿಟಮಿನ್‌ಗಳು: ಇದರಲ್ಲಿರುವ ವಿಟಮಿನ್‌ ಎ ಅಂಶಗಳು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಸಿ ವಿಟಮಿನ್‌ ಸಹ ಹೇರಳವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಹೀರೆಕಾಯಿಯಲ್ಲಿ ಫೋಲೇಟ್‌ ಸೇರಿದಂತೆ ಹಲವು ರೀತಿಯ ಬಿ ವಿಟಮಿನ್‌ ಗಳಿವೆ. ಭ್ರೂಣದ ಮೆದುಳು ಹಾಗೂ ಬೆನ್ನು ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಅಂಶ ಫೋಲೇಟ್‌. ಹಾಗಾಗಿ ಗರ್ಭಿಣಿಯರಿಗೂ ಹಿತ-ಮಿತವಾಗಿ ಹೀರೆಕಾಯಿ ಸೇವನೆ ಒಳ್ಳೆಯದು
ಕ್ಯಾಲರಿ ಕಡಿಮೆ: ದೇಹಕ್ಕೆ ಹೆಚ್ಚಿನ ಕ್ಯಾಲರಿ ತುರುಕದೆ, ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಸತ್ವ ಗಳನ್ನು ನೀಡುವಂಥ ತರಕಾರಿಯಿದು. ನಾರಿನಂಶ ಹೇರಳವಾಗಿ ಇರುವುದರಿಂದ, ಬೇಗನೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಅನುಕೂಲಕರವಾದ ತರಕಾರಿಯಿದು. ಮಾತ್ರವಲ್ಲ, ನಾರು ಸಾಕಷ್ಟು ಇರು ವುದರಿಂದ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಿ, ಮಲಬದ್ಧತೆಯನ್ನು ದೂರ ಮಾಡುತ್ತದೆ.
ಹೃದಯಕ್ಕೆ ಪೂರಕ: ನಾರಿನಂಶ ಹೆಚ್ಚಿರುವ ತರಕಾರಿಗಳು ರಕ್ತದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುತ್ತವೆ. ಈ ಕೆಲಸದಲ್ಲಿ ಹೀರೆಕಾಯಿ ಸಹ ಮುಂದು. ಜೊತೆಗೆ, ಇದರಲ್ಲಿರುವ ಪೊಟ್ಯಾಶಿಯಂ ಅಂಶವು ರಕ್ತದೊತ್ತಡ ಏರದಂತೆ ಕಾಪಾಡುವಲ್ಲಿ ಸಹಕಾರಿ. ಹಾಗಾಗಿ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಪೂರಕವಾದ ಅಂಶಗಳು ಹೀರೆಕಾಯಿಯಲ್ಲಿವೆ.
ಉತ್ಕರ್ಷಣ ನಿರೋಧಕಗಳು: ದೇಹದಲ್ಲಿ ಉರಿಯೂತ ಹೆಚ್ಚಿದರೆ ರೋಗಗಳೂ ಹೆಚ್ಚಾದಂತೆ. ಇವುಗಳನ್ನು ತಡೆಯಲು ಉತ್ಕರ್ಷಣ ನಿರೋಧಕಗಳು ಬೇಕು. ಉರಿಯೂತ ನಿವಾರಕ ಫ್ಲೆವ ನಾಯ್ಡ್‌ಗಳು ಹೀರೆಕಾಯಿಯಲ್ಲಿ ಸಾಕಷ್ಟಿವೆ. ಬೀಟಾ ಕ್ಯಾರೊಟಿನ್‌ ಸಹ ಇದ್ದು ದೇಹದ ಒಟ್ಟಾರೆ ಸ್ವಾಸ್ಥ್ಯ ಸುಧಾರಣೆಗೆ ಈ ತರಕಾರಿ ಪೂರಕವಾಗಿದೆ

Leave a Reply

Your email address will not be published. Required fields are marked *

error: Content is protected !!