ಉದಯವಾಹಿನಿ, ಓಂಕಾಳು, ಅಜವಾನ ಎಂದೆಲ್ಲಾ ಕರೆಸಿಕೊಳ್ಳುವ ಈ ಸಣ್ಣ ಬೀಜಗಳ ಬಳಕೆ ಹಲವು ಶತಮಾನಗಳಷ್ಟು ಹಳೆಯದ್ದು. ಒಗ್ಗರಣೆಗಳ ಘಮ ಹೆಚ್ಚಿಸುವ ಚಕ್ಕುಲಿ, ಪಕೋಡಾದಂಥ ಕುರು ಕಲು ತಿಂಡಿಗಳ ರುಚಿಗಟ್ಟಿಸುವ ಅಜವಾನ ಹಲವಾರು ರೀತಿಯಲ್ಲಿ ಬಳಕೆಯಲ್ಲಿದೆ. ಅದರಲ್ಲೂ ಔಷಧೀಯ ಗುಣಗಳಿಗಾಗಿ ಇದರ ಬಳಕೆ ಅಪಾರ. ಹಸಿವು ಹೆಚ್ಚಿಸುವ ಸರಳ ಕೆಲಸದಿಂದ ಹಿಡಿದು, ತೂಕ ಇಳಿಸುವ ಘನಂದಾರಿ ಕೆಲಸದವರೆಗೆ ಇದರ ಉಪಯೋಗ ಬಹಳಷ್ಟಿದೆ. ಮೂಗರಳಿಸುವಂಥ ಘಮ ಇದ್ದರೂ, ರುಚಿಯಲ್ಲಿದು ಸ್ವಲ್ಪ ಕಟು, ಘಾಟು ಮತ್ತು ಖಾರ. ಪರಾಟೆಗಳಿಂದ ತೊಡಗಿ ಉಪ್ಪಿನಕಾಯಿಗಳವರೆಗೆ ಹಲವು ರೀತಿಯ ಅಡುಗೆಗಳಲ್ಲಿ ಬಳಕೆಯಲ್ಲಿದೆ. ಇದು ಭಾರತೀಯ ಅಡುಗೆ ಮನೆಗಳ ಸಂಗಾತಿ ಮಾತ್ರವೇ ಅಲ್ಲ, ಪಶ್ಚಿಮ ಏಷ್ಯಾ ಸಂಸ್ಕೃತಿಗಳಲ್ಲೂ ಸೂಪಶಾಸ್ತ್ರದ ಸಂಗಾತಿ. ಕರಿಯುವ ಮತ್ತು ಖಾರದ ಅಡುಗೆಗಳಲ್ಲಿ ಇದರ ಘಮ ಪ್ರಿಯವೆನಿಸುತ್ತವೆ. ಹೊಟ್ಟೆ ಬಿರಿಯುವ ಹಾಗೆ ಊಟ ಮಾಡಿದಾಗ, ಅಜವಾನದ ಚಹಾ ಅಥವಾ ಕಷಾಯ ಕುಡಿಯುವುದರಿಂದ ಜೀರ್ಣ ಸರಾಗವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ.
ಉತ್ಕರ್ಷಣ ನಿರೋಧಕ: ಪ್ರಬಲ ಉತ್ಕರ್ಷಣ ನಿರೋಧಕವಾಗಿ ಇದು ಬಳಕೆಯಲ್ಲಿದ್ದು ಉರಿ ಯೂತ ನಿವಾರಿಸುವಲ್ಲಿ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಫಂಗಸ್, ಬ್ಯಾಕ್ಟೀರಿಯಗಳೊಂದಿಗೆ ಹೋರಾಡುತ್ತದೆ. ಹಾಗೆಂದೇ ಜ್ವರ ಬಂದಾಗ ಓಂಕಾಳಿನ ಬಳಕೆ ಪರಂಪರಾಗತ ಔಷಧ ಪದ್ಧತಿಯಲ್ಲಿದೆ. ಮುಟ್ಟಿನ ಹೊಟ್ಟೆನೋವಿನ ಉಪಶಮನಕ್ಕೂ ಇದು ಪರಿಣಾಮಕಾರಿ ಮದ್ದು.
ಜೀರ್ಣಕಾರಿ: ಅಜವಾನಕ್ಕೆ ದೇಹವನ್ನು ಡಿಟಾಕ್ಸ್ ಮಾಡುವ ಸಾಮರ್ಥ್ಯವಿದೆ. ಹಸಿವನ್ನು ಹೆಚ್ಚಿಸುವುದೇ ಅಲ್ಲದೆ, ಪಚನಕ್ರಿಯೆಯನ್ನು ಚುರುಕು ಮಾಡಬಲ್ಲದು. ಹೊಟ್ಟೆಯುಬ್ಬರ, ವಾಯು ಬಾಧೆ, ಆಸಿಡಿಟಿ, ಅಜೀರ್ಣದಿಂದ ಉಂಟಾಗುವ ಹೊಟ್ಟೆನೋವಿಗೆ ಇದು ಶೀಘ್ರ ಉಪಶಮನ ನೀಡುತ್ತದೆ. ತೀವ್ರ ಆಸಿಡಿಟಿಯಿಂದ ಕರುಳಿನಲ್ಲಿ ಹುಣ್ಣಾದರೆ, ಆ ನೋವು ತಡೆಯಲು ಇದು ಉಪಯುಕ್ತ. ಡಯರಿಯಾ, ಕಿಬ್ಬೊಟ್ಟೆ ನೋವಿನ ಶಮನಕ್ಕೆ ಓಂಕಾಳಿನ ಕಷಾಯ ಬಳಕೆಯಲ್ಲಿದೆ. ಪುಟ್ಟ ಮಕ್ಕಳಿಗೆ ಅಜೀರ್ಣದಿಂದ ಹೊಟ್ಟೆ ನೋವು ಬಂದರೆ, ಓಂಕಾಳನ್ನು ಸೇವಿಸಲು ನೀಡುವ ಕ್ರಮವಿಲ್ಲ. ಬದಲಿಗೆ, ಅಜವಾನದ ಎಣ್ಣೆಯನ್ನು ಹೊಕ್ಕುಳಿನ ಸುತ್ತಮುತ್ತ ಹಚ್ಚಲಾಗುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ತೂಕ ಇಳಿಕೆ: ಜೀರ್ಣಾಂಗಗಳ ತೊಂದರೆಯನ್ನು ಕಡಿಮೆ ಮಾಡಿ, ದೇಹದ ಚಯಾಪಚಯವನ್ನೂ ಹೆಚ್ಚಿಸುವ ಈ ಮಸಾಲೆ ಬೀಜಗಳು, ತೂಕ ಇಳಿಕೆಗೂ ಬಳಕೆಯಾಗುತ್ತವೆ. ಇದರಲ್ಲಿರುವ ಥೈಮೋಲ್ ಎಂಬ ಅಂಶವು ಚಯಾಪಚಯ ಚುರುಕಾಗಿಸಿ, ಕೊಬ್ಬನ್ನೂ ವಿಘಟಿಸುತ್ತದೆ.
