ಉದಯವಾಹಿನಿ, ಬೆಳಗಾಗುತ್ತಿದ್ದಂತೆಯೇ ನಾವು ಮಾಡುವ ಕೆಲಸಗಳಲ್ಲಿ ಎರಡು ಪ್ರಮುಖವಾದವು. ಒಂದು ಮೊಬೈಲ್ ಗೀರುವುದು, ಇನ್ನೊಂದು ಕಾಫಿ/ ಚಹಾ ಹೀರುವುದು. ಇವೆರಡೂ ಇಲ್ಲದಿದ್ದರೆ ಬೆಳಕು ಹರಿಯುವುದೇ ಇಲ್ಲ ನಮಗೆ. ಇವೆರಡೂ ದೇಹಕ್ಕೆ ನೀಡುವುದರಲ್ಲಿ ಕೆಫೇನ್ ಅಂಶವೇ ಪ್ರಧಾನವಾಗಿ ನಮಗೆ ಲೆಕ್ಕಕ್ಕೆ ಬರುವುದು. ಶರೀರದಲ್ಲಿ ಕಾಣುವ ಚೇತರಿಕೆಗೆ ಇದೇ ಪ್ರಧಾನವಾದ ಕಾರಣ. ಚಹಾ ಎಲೆಗಳ ರಸ ಹೀರುವುದು ಒಳ್ಳೆಯದೋ ಅಥವಾ ಕಾಫಿ ಬೀಜಗಳ ರಸ ಹೀರುವುದೋ ಎಂಬ ಚರ್ಚೆ ಬಹುಶಃ ಇವುಗಳ ಹುಟ್ಟಿನಷ್ಟೇ ಹಳೆಯದು ಆದರೂ ಯಾವುದು ಸೂಕ್ತ..?
ಚಹಾದ ಹುಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಕಥೆಯಿದೆ. ಚೀನಾದ ಚಕ್ರವರ್ತಿ ಷೆನ್ ನಂಗ್ ಒಮ್ಮೆ ತನ್ನ ಪಡೆಯೊಂದಿಗೆ ಎಲ್ಲಿಗೋ ಹೋಗುತ್ತಿದ್ದಾಗ ದಾರಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನೆರಳಿನಲ್ಲಿ ಬೀಡು ಬಿಟ್ಟಿದ್ದ. ಏನೋ ಕಾರಣಕ್ಕಾಗಿ ಪಾತ್ರೆಯೊಂದರಲ್ಲಿ ನೀರು ಕುದಿಯುತ್ತಿತ್ತು. ಎಲ್ಲಿಂದಲೋ ತೂರಿ ಬಂದ ಚಹಾ ಎಲೆಗಳು ಈ ಪಾತ್ರೆಯೊಳಗೆ ಬಿದ್ದು, ತನ್ನಷ್ಟಕ್ಕೇ ಕುದಿದು, ಚಹಾ ಪರಿಮಳದ ನೀರು ಸಿದ್ಧವಾಯಿತು. ಈ ಲಘುವಾದ ಡಿಕಾಕ್ಷನ್ ಘಮ ಚಕ್ರವರ್ತಿಗೆ ಇಷ್ಟವಾಯಿತು ಎಂಬುದು ಕಥೆ. ಇದೇನೇ ಇದ್ದರೂ, ಸಾವಿರಾರು ವರ್ಷಗಳಿಂದ ಏಷ್ಯಾದ ಸಂಸ್ಕೃತಿಗಳಲ್ಲಿ ಚಹಾಗೊಂದು ವಿಶಿಷ್ಟವಾದ ಸ್ಥಾನ ಇರುವುದಂತೂ ಹೌದು.
ಕಾಫಿಗೂ ಅಂಥದ್ದೇ ಕಥೆಯೊಂದಿದೆ. ಇಥಿಯೋಪಿಯಾದ ಕುರಿಗಾಹಿಯೊಬ್ಬನ ಕುರಿಗಳು ಕೆಲವು ಪೊದೆಗಳಿಂದ ಪುಟ್ಟ ಕೆಂಪು ಹಣ್ಣುಗಳನ್ನು ಆಸೆಯಿಂದ ಮೆಲ್ಲುತ್ತಿದ್ದವಂತೆ. ಅದನ್ನು ತಿಂದ ಮೇಲೆ ಎಷ್ಟೋ ಹೊತ್ತಿನವರೆಗೆ ಸಂತೋಷದಿಂದ ಕುಣಿದಾಡುತ್ತಿದ್ದವು. ಆನಂತರ ಅವುಗಳ ಹಾಲು, ಕೊಬ್ಬು ಎಲ್ಲವೂ ಹೆಚ್ಚಿದ್ದರಿಂದ ಆ ಕೆಂಪು ಕಾಫಿ ಹಣ್ಣುಗಳ ಬಗ್ಗೆ ಮಾನವರಿಗೆ ಆಸಕ್ತಿ ಬೆಳೆಯಿತು ಎನ್ನುವುದು ಕಾಫಿಯ ಹುಟ್ಟಿನ ಪ್ರವರ ಇದೀಗ ಮುಖ್ಯವಾದ ಪ್ರಶ್ನೆ- ಕಾಫಿಯೊ ಚಹಾವೊ ಆರೋಗ್ಯಕ್ಕೆ ಯಾವುದು ಸರಿ? ಇವೆರಡೂ ಪೇಯಗಳಲ್ಲಿ ಮುಖ್ಯವಾಗಿ ಇರುವುದು ಕೆಫೇನ್ ಮತ್ತು ಉತ್ಕರ್ಷಣ ನಿರೋಧಕಗಳು. ಇದರಿಂದ ದೇಹದಲ್ಲಿನ ಶಕ್ತಿ ಸಂಚಯನ ಹೆಚ್ಚುತ್ತದೆ; ಮೆದುಳು ಚುರುಕಾಗುತ್ತದೆ; ಚಯಾಪಚಯ ವೃದ್ಧಿಸುತ್ತದೆ ಮತ್ತು ತೂಕ ಇಳಿಕೆಗೂ ನೆರವಾಗುತ್ತದೆ. ಹಾಗೆಂದು ಈ ಎರಡೂ ಪೇಯಗಳ ಗುಣಗಳು ಒಂದೇ ಎಂದೇನಲ್ಲ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳಿಗೆ ಹೆಚ್ಚಾಗಿ ಮನಸ್ಸನ್ನು ಶಾಂತವಾಗಿಸುವ ಗುಣಗಳಿವೆ.
