ಉದಯವಾಹಿನಿ, ನವರಾತ್ರಿ ಎಂದರೆ ಹಬ್ಬದ ಸಾಲು… ಊಟದಲ್ಲಿ ಸಿಹಿಗಳದ್ದೇ ಸಿಂಹಪಾಲು. ಉಪವಾಸ ಮಾಡುವವರಿಗೂ ನಂತರ ಭರ್ಜರಿ ಊಟ. ಶಾರದೆ ಸ್ಥಾಪಿಸಿದರೆ ದಿನಕ್ಕೊಂದು ಭಕ್ಷ್ಯದ ನೈವೇದ್ಯ. ಗೊಂಬೆ ಕೂರಿಸಿದರೆ ದಿನಕ್ಕೊಂದು ರೀತಿಯ ಗೊಂಬೆ ತಿಂಡಿ. ಇವೆಲ್ಲದರ ಫಲವೆಂದರೆ ದೇವರ ಹೆಸರಲ್ಲಿ ಮನೆಮಂದಿಗೆ ರಸಕವಳ. ತಿನ್ನುವುದೇನೊ ಸರಿ, ಅದನ್ನು ಅರಗಿಸಬೇಕಲ್ಲ. ಎಲ್ಲರ ಪಚನ ಶಕ್ತಿಯೂ ಒಂದೇಸಮ ಇರುವುದಿಲ್ಲ. ಪರಿಣಾಮ ವಾಗಿ ಹೊಟ್ಟೆ ಭಾರವಾಗುವುದು, ಹೊಟ್ಟೆ ಉಬ್ಬರಿಸುವುದು, ಹುಳಿತೇಗು, ಆಸಿಡಿಟಿ, ಅಜೀರ್ಣದಂಥ ತೊಂದರೆಗಳು ಕಾಟ ಕೊಡುತ್ತವೆ. ಹಬ್ಬ ಮುಗಿಯುವಷ್ಟರಲ್ಲಿ ಹೊಟ್ಟೆಯೇ ಹಾಳಾದಂಥ ಅವಸ್ಥೆಗೆ ಬಂದು ತಲುಪುತ್ತೇವೆ.
ಜೀರಿಗೆ: ನೈಸರ್ಗಿಕವಾಗಿ ಹೊಟ್ಟೆಯಲ್ಲಿರುವ ವಾಯುವನ್ನು ನಿರ್ಮೂಲಗೊಳಿಸಿ, ಜೀರ್ಣಕ್ರಿಯೆ ಯನ್ನು ಸರಾಗ ಮಾಡುವಂಥ ವಸ್ತುವಿದು. ಜೀರಿಗೆಯನ್ನು ಚಹಾದಂತೆ ಡಿಕಾಕ್ಷನ್ ತೆಗೆದು ಕುಡಿಯಬಹುದು. ಪುಡಿ ಮಾಡಿ ಕಷಾಯ ಮಾಡಿಕೊಳ್ಳಬಹುದು. ಜೀರಿಗೆ ಪುಡಿಯನ್ನು ಬಿಸಿಯಾದ ಅನ್ನಕ್ಕೆ ಸ್ವಲ್ಪವೇ ತುಪ್ಪ ಮತ್ತು ಚಿಟಿಕೆ ಉಪ್ಪು ಸೇರಿಸಿ ಊಟ ಮಾಡಬಹುದು. ಅಂತೂ ಯಾವುದೇ ರೀತಿಯಲ್ಲಿ ಜೀರಿಗೆಯನ್ನು ಸೇವಿಸಿದರೂ ಹೊಟ್ಟೆಯ ತೊಂದರೆಗಳಿಗೆ ಉಪಶಮನ ದೊರೆಯುತ್ತದೆ.
ಪೆಪ್ಪರ್‌ಮಿಂಟ್ ಚಹಾ: ಪೆಪ್ಪರ್‌ಮಿಂಟ್‌ನಲ್ಲಿರುವ ಮೆಂಥಾಲ್ ಅಂಶವು ಜೀರ್ಣಾಂಗಗಳ ಸ್ನಾಯುಗಳನ್ನು ವಿಕಸನಗೊಳಿಸುತ್ತದೆ. ಇದರಿಂದ ಹೊಟ್ಟೆ ಭಾರವಾಗಿ, ಉಬ್ಬರಿಸಿದಂತಾಗಿದ್ದರೆ ಅಥವಾ ಹೊಟ್ಟೆ ನೋವಿದ್ದರೆ ಕಡಿಮೆಯಾಗುತ್ತದೆ. ಊಟವಾದ ಸ್ವಲ್ಪ ಹೊತ್ತಿನಲ್ಲಿ ಒಂದು ಕಪ್ ಹದ ಬಿಸಿಯಾದ ಪೆಪ್ಪರ್‌ಮಿಂಟ್ ಚಹಾ ಹೀರುವುದು ಆರಾಮ ನೀಡುತ್ತದೆ.
ಶುಂಠಿ: ಹಲವು ರೀತಿಗಳಲ್ಲಿ ಉಪಯೋಗಿಸಬಹುದು. ಜೀರ್ಣಾಂಗಗಳಿಗೆ ಆರಾಮ ನೀಡಿ, ಅಜೀರ್ಣವಾಗದಂತೆ ಕಾಪಾಡುವ ಸಾಮರ್ಥ್ಯ ಇದರದ್ದು. ಶುಂಠಿ ಚಹಾ ಮಾಡಬಹುದು, ಕಷಾ ಯದಂತೆ ಸೇವಿಸಬಹುದು, ಮಜ್ಜಿಗೆಯಲ್ಲಿ ನೆನೆಸಿ ಒಣಗಿಸಿಟ್ಟುಕೊಂಡು ಕ್ಯಾಂಡಿಗಳಂತೆ ಚೀಪ ಬಹುದು, ಭಾವನಾಶುಂಠಿ ಎಂಬ ಹೆಸರಿನಲ್ಲಿ ಆಯುರ್ವೇದ ಅಂಗಡಿಗಳಲ್ಲಿ ಇರುವುದನ್ನು ಉಪಯೋಗಿಸಬಹುದು, ಹಸಿ ಶುಂಠಿಯನ್ನೇ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಬಳಸಬಹುದು.
