ಉದಯವಾಹಿನಿ, ನವರಾತ್ರಿ ಉತ್ಸವದ ಆರಂಭದ ದಿನದಿಂದಲೇ ಎಲ್ಲೆಡೆ ದಾಂಡಿಯಾ ನೃತ್ಯದ ಗದ್ದಲ. ನೃತ್ಯದ ನಡುವೆಯೇ ಎದೆನೋವು, ಉಸಿರುಗಟ್ಟುವಂಥ ಸಮಸ್ಯೆಗಳನ್ನು ಹೊತ್ತು ವೈದ್ಯರಲ್ಲಿಗೆ ಹೋದವರು ನೂರಾರು ಮಂದಿ. ಅನಾರೋಗ್ಯಕರ ಆಹಾರ ಕ್ರಮ ಮತ್ತು ದೈಹಿಕ ಶ್ರಮವಿಲ್ಲದ ಕಾರಣಕ್ಕಾಗಿ ಹೃದಯ ಚೀರುತ್ತಿರುವುದು ಸ್ಪಷ್ಟ. ಅಂದರೆ, ದೇಹಕ್ಕೆ ಶ್ರಮದ ಅಭ್ಯಾಸವಿಲ್ಲ; ಆಹಾರದಲ್ಲಿ ಶಿಸ್ತಿಗೆ ಅವಕಾಶವಿಲ್ಲ! ಹಾಗಾದರೆ ನವರಾತ್ರಿ ಮತ್ತು ಉಳಿದೆಲ್ಲ ದಿನಗಳಲ್ಲಿ, ಮುಖ್ಯವಾಗಿ ದಾಂಡಿಯ ಆಡುವ ಸಮಯದಲ್ಲಿ, ಆಹಾರದ ಶಿಸ್ತು ಹೇಗಿರಬೇಕು..? ಕೊಬ್ಬು ಹೆಚ್ಚಿರುವ ಆಹಾರಗಳು: ಕರಿದ ತಿಂಡಿಗಳು, ಬೆಣ್ಣೆ- ತುಪ್ಪ ಜಿನುಗುತ್ತಿರುವ ಆಹಾರ ಗಳಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದ ದೇಹದಲ್ಲಿ ಕೊಲೆ ಸ್ಟ್ರಾಲ್‌ ಪ್ರಮಾಣ ಏರಿಕೆಯಾಗಿ, ರಕ್ತನಾಳಗಳು ಮುಚ್ಚಿಕೊಳ್ಳುತ್ತವೆ. ಹೃದಯಾಘಾತಕ್ಕೆ ಮೂಲ ಕಾರಣಗಳಲ್ಲಿ ಇದೂ ಹೌದು. ಹಾಗಾಗಿ ತಿನ್ನುವ ಆಹಾರದಲ್ಲಿನ ಕೊಬ್ಬಿನಂಶದ ಬಗ್ಗೆ ಗಮನಕೊಡಿ. ಹಬ್ಬದ ನೆವ ಮುಂದಿಟ್ಟುಕೊಂಡು ಅತಿಯಾದ ಜಿಡ್ಡಿನ ಆಹಾರ ತಿನ್ನುವ ಬದಲು, ಕಡಿಮೆ ಕೊಬ್ಬಿನ ಆರೋಗ್ಯಕರ ಆಯ್ಕೆಗಳತ್ತ ಕೈ ಚಾಚಿ.
ಸಕ್ಕರೆ-ಬೆಲ್ಲ ಅತಿಯಾಗಿ ಸಲ್ಲ: ಸಕ್ಕರೆಗಿಂತ ಬೆಲ್ಲ ಒಳ್ಳೆಯದು ಎಂಬ ವಾದ ಇರುವುದು ಹೌದಾ ದರೂ, ಬೆಲ್ಲವನ್ನು ಮನಸೋಇಚ್ಛೆ ತಿನ್ನಬಹುದು ಎಂಬುದು ಇದರರ್ಥವಲ್ಲ. ಸಕ್ಕರೆಯನ್ನಾಗಲೀ, ಬೆಲ್ಲವನ್ನಾಗಲೀ ಸಿಕ್ಕಾಪಟ್ಟೆ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್‌ ಏರಿಳಿಕೆ ಯಾಗಬಹುದು. ಇದರಿಂದ ತಲೆ ಸುತ್ತಿದಂತಾಗುವುದು, ಸುಸ್ತು, ಆಯಾಸ ಮುಂತಾದವು ಬೆನ್ನು ಹತ್ತುತ್ತವೆ. ಅದರಲ್ಲೂ ದಾಂಡಿಯಾದಂಥ ದೈಹಿಕ ಶ್ರಮದ ಹೊತ್ತಿನಲ್ಲಿ ಆರೋಗ್ಯ ಏರು ಪೇರಾಗುವಂತೆ ಮಾಡುತ್ತವೆ.
ಮಸಾಲೆಯುಕ್ತ ಆಹಾರಗಳು: ಬಾಯಿಗೆ ರುಚಿ ಎಂಬ ಕಾರಣಕ್ಕಾಗಿ ಮಸಾಲೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸಿದರೆ ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ. ತೀಕ್ಷ್ಣ ಖಾರ, ಜೊತೆಗೆ ಗಡದ್ದಾಗಿ ಗರಂ ಮಸಾಲೆ ಸೇರಿದ ಅಡುಗೆಗಳು ಹೊಟ್ಟೆಯಲ್ಲಿ ಆಸಿಡಿಟಿ ಹೆಚ್ಚಿಸುತ್ತವೆ. ಇದರಿಂದ ರಕ್ತದೊತ್ತಡವೂ ಹೆಚ್ಚುತ್ತದೆ. ದಾಂಡಿಯಾ ಆಡುವುದಕ್ಕೆ ಮುನ್ನ ಇಂಥ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯುರಿ, ಎದೆಯುರಿಗಳು ಹೆಚ್ಚಾಗುತ್ತವೆ.

Leave a Reply

Your email address will not be published. Required fields are marked *

error: Content is protected !!