ಉದಯವಾಹಿನಿ, ಸಾಮಾಜಿಕ ಮಾಧ್ಯಮ ನೋಡುತ್ತೀರಿ, ನಿಮ್ಮಿಷ್ಟದ ಯಾವುದೋ ನಿಯತಕಾಲಿಕ ಓದುತ್ತೀರಿ, ಯಾರೊಂದಿಗೊ ಮಾತಾಡುತ್ತೀರಿ, ಹೊರಗೆಲ್ಲೊ ಹೋಗುತ್ತೀರಿ- ಎಲ್ಲ ಸಂದರ್ಭಗಳಲ್ಲೂ ಒಂದಿಷ್ಟು ಮಾಹಿತಿಗಳು ವಿನಿಮಯ ಆಗಿಯೇ ಆಗುತ್ತವೆ… ಅವುಗಳಲ್ಲಿ ಒಂದಿಷ್ಟು ಸತ್ಯ, ಇಂದಿಷ್ಟು ಮಿಥ್ಯ. ಅದರಲ್ಲೂ ಆರೋಗ್ಯ ಮತ್ತು ಪೌಷ್ಟಿಕಾಂಶಗಳ ಬಗ್ಗೆ ಹರಡುವ ಅಂತೆ-ಕಂತೆಗಳಿಗೆ ತುದಿ ಮೊದಲೇ ಇಲ್ಲ. ಅದನ್ನು ತಿಂದರೆ ಹೀಗಾಗುತ್ತದೆ, ಇದನ್ನು ತಿನ್ನದಿದ್ದರೆ ಹಾಗಾಗುತ್ತದೆ… ಎಂದು ಕೋಡು, ಬಾಲ ಬೆಳೆಯುತ್ತಾ ಮುಂದೋಡುವ ಸುದ್ದಿಗಳಲ್ಲಿ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು? ಈ ಅಂತೆ-ಕಂತೆಗಳ ಸಂತೆಯಲ್ಲಿ ಯಾವುದು ಸರಿ, ಯಾವುದು ತಪ್ಪು? ಬದುಕಿನ ಎಲ್ಲಾ ವಲಯಗಳಲ್ಲಿ ಹರಿದಾಡುವಂತೆ, ಆಹಾರ ಮತ್ತು ಪೋಷಕಾಂಶಗಳ ಬಗ್ಗೆಯೂ ಬಹಳಷ್ಟು ಮಿಥ್ಯೆಗಳು ಪ್ರಚಲಿತದಲ್ಲಿವೆ ಹಾರಾಡುತ್ತಿರುವ ಒಂದಿಷ್ಟು ಕಲ್ಪನೆಗಳಿಗೆ ವಾಸ್ತವದ ಲೇಪ ಇಲ್ಲಿದೆ.
ಸಂಸ್ಕರಿತ ಬಿಳಿ ಸಕ್ಕರೆ ತಿಂದರೆ ಮಾತ್ರವೇ ಆರೋಗ್ಯಕ್ಕೆ ಹಾಳು; ಉಳಿದಂತೆ, ಜೇನುತುಪ್ಪ, ಬೆಲ್ಲ ಮುಂತಾದ ನೈಸರ್ಗಿಕವಾಗಿ ದೊರೆಯುವ ಸಿಹಿಗಳನ್ನು ಎಷ್ಟು ತಿಂದರೂ ತೊಂದರೆಯಿಲ್ಲ- ಇದು ಎಲ್ಲೆಡೆ ಪ್ರಚಲಿತದಲ್ಲಿ ಇರುವಂಥದ್ದು. ತಜ್ಞರ ಪ್ರಕಾರ, ಸಿಹಿ ಅಂದರೆ ಸಿಹಿಯೇ. ಸಂಸ್ಕರಿತ ಬಿಳಿ ಸಕ್ಕರೆಯಷ್ಟು ಉಳಿದವು ಮಾರಕವಲ್ಲದಿರಬಹುದು. ಆದರೆ ಅವುಗಳನ್ನಾದರೂ ಮಿತಿಮೀರಿದರೆ ಆಪತ್ತು ತಪ್ಪಿದ್ದಲ್ಲ. ಆದರೊಂದು, ಸಕ್ಕರೆಯಂಶದ ಜೊತೆಗೆ ಜೇನುತುಪ್ಪದಂಥವು ಒಂದಿಷ್ಟು ಸತ್ವಗಳನ್ನು ದೇಹಕ್ಕೆ ನೀಡುವುದು ನಿಜ. ಹಾಗೆಂದು ಎಷ್ಟು ತಿಂದರೂ ದೋಷವಿಲ್ಲ ಎಂಬುದು ನಿಜವಲ್ಲ.
ಪಿಷ್ಟವೆಂದರೆ ನಾವು ತಿನ್ನುವ ಅನ್ನದಲ್ಲಿ ಮಾತ್ರವೇ ದೊರೆಯುವುದಲ್ಲ. ಯಾವುದೇ ಧಾನ್ಯಗಳು, ಕಾಳುಗಳು, ಹಣ್ಣು-ತರಕಾರಿಗಳು- ಹೀಗೆ ಬಹಳಷ್ಟು ಆಹಾರಗಳಿಂದ ನಾವು ಪಿಷ್ಟವನ್ನು ಕ್ರೋಢೀಕರಿಸುತ್ತೇವೆ. ಇವೆಲ್ಲವನ್ನೂ ಕಡಿಮೆ ಮಾಡಿಬಿಟ್ಟರೆ… ದೇಹಕ್ಕೆ ಪೌಷ್ಟಿಕಾಂಶಗಳು ದೊರೆಯುವುದಾದರೂ ಹೇಗೆ? ಇದರಲ್ಲೊಂದು ವಿಷಯವಿದೆ, ನಾವಿಲ್ಲಿ ಸಂಕೀರ್ಣವಾದ ಪಿಷ್ಟಗಳ ಬಗ್ಗೆ ಹೇಳುತ್ತಿದ್ದೇವೆ ಹೊರತು ಕರಿದ ತಿಂಡಿಗಳು, ಮೈದಾ ಬ್ರೆಡ್, ಕುಕಿ ಮುಂತಾದ ಸಂಸ್ಕರಿತ, ಸರಳ ಪಿಷ್ಟದ ಬಗ್ಗೆ ಅಲ್ಲ. ಸಂಸ್ಕರಿಸಿದ ಸರಳ ಪಿಷ್ಟಗಳು ನಿಶ್ಚಿತವಾಗಿ ಆರೋಗ್ಯಕ್ಕೆ ಮಾರಕ.
ಕೊಬ್ಬಿನ ವಸ್ತುಗಳೆಂದರೆ ಹೆದರಿ ಓಡುತ್ತಿದ್ದ ಕಾಲವೊಂದಿತ್ತು. ಈಗ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ಬೇಕು ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ. ಅಗತ್ಯ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳುವುದಕ್ಕೆ, ಕೋಶಗಳ ಆರೋಗ್ಯಕ್ಕೆ, ಅಂಗಾಗಗಳ ಸ್ವಾಸ್ಥ್ಯಕ್ಕೆ- ಹೀಗೆ ಬಹಳಷ್ಟು ಕೆಲಸಗಳಿಗೆ ಆರೋಗ್ಯಕರ ಕೊಬ್ಬಿನ ಅಗತ್ಯವಿದೆ. ಅದರರ್ಥ ಚೀಸ್, ಬೆಣ್ಣೆ ಮುಂತಾದವನ್ನು ಮನಸೋಇಚ್ಛೆ ತಿನ್ನಬಹುದು ಎಂದಲ್ಲ.
