ಉದಯವಾಹಿನಿ, ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ 1993ರಲ್ಲಿ ʼಪರಂಪರʼ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರು. ಆದರೆ ಆರಂಭದ ದಿನಗಳಲ್ಲಿ ಒಬ್ಬ ಚಿತ್ರ ನಿರ್ಮಾಪಕಿಯೊಂದಿಗೆ ನಡೆದ ಆಘಾತಕಾರಿ ಅನುಭವವನ್ನು ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ನಿರ್ಮಾಪಕಿ ಹಣ ನೀಡಿದಾಗಲೆಲ್ಲ ಆಕೆಯ ಕೆನ್ನೆಗೆ ಮುತ್ತಿಡಬೇಕೆಂಬ ಷರತ್ತಿನ ಮೇರೆಗೆ, ವಾರಕ್ಕೆ 1,000 ರೂ. ಸಂಬಳ ನೀಡಲಾಗುತ್ತಿತ್ತು ಎಂದು ಸೈಫ್ ಬಹಿರಂಗಪಡಿಸಿದ್ದಾರೆ.
ಸೈಫ್, ತಾಯಿ ಶರ್ಮಿಳಾ ಟ್ಯಾಗೋರ್ ಅವರಂತಹ ಖ್ಯಾತ ನಟಿಯ ಮಗನಾಗಿ ಚಿತ್ರರಂಗಕ್ಕೆ ಬಂದರೂ, “ನನಗೆ ಉತ್ತಮ ಚಿತ್ರಗಳು ಸುಲಭವಾಗಿ ಸಿಕ್ಕವು ಎಂದು ಜನರು ಭಾವಿಸುತ್ತಾರೆ. ಆದರೆ ನಾನು ಮುಖ್ಯ ಪಾತ್ರಗಳನ್ನು ಪಡೆಯಲಿಲ್ಲ” ಎಂದು ಹೇಳಿದ್ದಾರೆ. “ನಮ್ಮ ಕುಟುಂಬದಿಂದ ದೊಡ್ಡ ತಾರೆಯಾಗಲು ತರಬೇತಿ ಸಿಗಲಿಲ್ಲ. ಸಾಧಾರಣ, ಆಡಂಬರವಿಲ್ಲದ ವರ್ತನೆಯನ್ನು ಕಲಿಸಲಾಗಿತ್ತು” ಎಂದು ತಿಳಿಸಿದರು. 90ರ ದಶಕದಲ್ಲಿ ದೊಡ್ಡ ತಾರೆಯರಿಗಿಂತ ನಮ್ಮ ವರ್ತನೆ ವಿಭಿನ್ನವಾಗಿತ್ತು ಎಂದರು.
2025ರ ಜನವರಿ 16ರಂದು ಮಧ್ಯರಾತ್ರಿ 2:30ಕ್ಕೆ ಸೈಫ್ ಮೇಲೆ ದಾಳಿ ನಡೆದು ಚಾಕುವಿನಿಂದ ಚುಚ್ಚಿದ ಗಾಯಗಳಾಗಿದ್ದವು. ಲೀಲಾವತಿ ಆಸ್ಪತ್ರೆಯಲ್ಲಿ ಸೈಫ್ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು. “ಆ ಕ್ಷಣದಲ್ಲಿ, ನನ್ನ ಜೀವನವು ವರ್ಣರಂಜಿತವಾಗಿತ್ತು, ಐಷಾರಾಮಿಯಲ್ಲದಿದ್ದರೂ ಸಂತೋಷದಿಂದ ಕೂಡಿತ್ತು. ವಿಂಚೆಸ್ಟರ್‌ನ ವಾತಾವರಣ, ಪತ್ನಿ, ಮಕ್ಕಳ ಜತೆಯ ಪ್ರಯಾಣ, ವೈನ್‌ನ ರುಚಿ ಎಲ್ಲವೂ ನೆನಪಾಯಿತು” ಎಂದು ಆ ಘಟನೆಯನ್ನು ನೆನಪಿಸಿಕೊಂಡರು.
ಸೈಫ್ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ʼಜೆವೆಲ್ ಥೀಫ್ʼ ಚಿತ್ರದಲ್ಲಿ ಜೈದೀಪ್ ಅಹ್ಲಾವತ್ ಮತ್ತು ನಿಕಿತಾ ದತ್ತಾ ಜತೆ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಿಯದರ್ಶನ್ ಅವರ ʼಹೈವಾನ್ʼ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆ ಮತ್ತೆ ಕೆಲಸ ಮಾಡಲಿದ್ದಾರೆ.
