ಉದಯವಾಹಿನಿ, ಚಿಕ್ಕಮಗಳೂರು: ಕರ್ನಾಟಕದಲ್ಲಿ ರಸ್ತೆಗಳು ಚೆನ್ನಾಗಿವೆಯೋ ಇಲ್ಲವೋ, ಸರ್ಕಾರ ಬಡವರಿಗೆ ಒಳ್ಳೆಯ ಅಕ್ಕಿ ನೀಡುತ್ತಿದೆಯೋ ಇಲ್ಲವೋ ಎಂದು ದೇವಲೋಕದ ಯಮರಾಜ ಹಾಗೂ ಚಿತ್ರಗುಪ್ತ ಕಾಫಿನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ! ಅಲ್ಲದೇ ಕುಡಿದು ವಾಹನ ಚಾಲನೆ ಮಾಡುವವರು, ರಸ್ತೆಗುಂಡಿಗಳ ಬಗ್ಗೆಯೂ ಜಾಗೃತಿ ಮೂಡಿಸಿದ್ದಾರೆ.
ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ರಸ್ತೆಗಳ ಪರಿಸ್ಥಿತಿ ಕಂಡು ನಿಡುವಾಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಹಾವಳಿ ಹಾಗೂ ಖಾಸಗಿ ವಾಹಿನಿಯ ʻಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಮೇಶ್ ಯಾದವ್ ಈ ಪ್ರಯೋಗ ಮಾಡಿದ್ದಾರೆ. ಇಬ್ಬರೂ ಯಮರಾಜ ಹಾಗೂ ಚಿತ್ರಗುಪ್ತನ ವೇಷ ಧರಿಸಿ ಗುಂಡಿಗಳನ್ನ ಅಳತೆ ಮಾಡಿ ದಾಖಲು ಮಾಡಿಕೊಂಡಿದ್ದಾರೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
