ಉದಯವಾಹಿನಿ, ಬೆಂಗಳೂರು: ಜನರ ಗಮನ ಬೇರೆ ಕಡೆ ಸೆಳೆಯೋಕೆ ಸಿದ್ದರಾಮಯ್ಯರಿಂದ ಸಮೀಕ್ಷೆ ತಂತ್ರ ಅಷ್ಟೇ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ಆರೋಪಿಸಿದ್ದಾರೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಗೊಂದಲ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಸರ್ಕಾರ ಜಾತಿಗಣತಿ ಮಾತ್ರವಲ್ಲ, ಈ ಸರ್ಕಾರ ಪ್ರಾರಂಭದಿಂದಲೇ ಗೊಂದಲದಲ್ಲಿದೆ. ಈ ಸರ್ಕಾರಕ್ಕೆ ಯಾವ ಶಬ್ದ ಹೇಳಬೇಕು ಅಂತ ಗೊತ್ತಿಲ್ಲ. ಗುಂಡಿಯಿಂದ ತಪ್ಪಿಸಿಕೊಳ್ಳೋಕೆ ಹೋಗಿ ಯುವತಿ ಸತ್ತಿದ್ದಾಳೆ. 2.5 ವರ್ಷ ಆದರೂ ಇವರಿಂದ ಗುಂಡಿ ಮುಚ್ಚೋಕೆ ಆಗಿಲ್ಲ. ಹೀಗಾದರೆ ಏನು ಅಭಿವೃದ್ಧಿ ಮಾಡ್ತಾರೆ ಎಂದು ಕಿಡಿಕಾರಿದರು.
ರಾಜ್ಯದ ಸಮೀಕ್ಷೆ ವಿರೋಧ ಮಾಡೋ ಬಿಜೆಪಿ (BJP) ನಾಯಕರು ಕೇಂದ್ರದ ಜಾತಿಗಣತಿಯಲ್ಲಿ ಭಾಗಿಯಾಗಲ್ಲವಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆಡಳಿತ ವೈಫಲ್ಯ ಎದುರಾದಾಗ ಇಂತಹ ಹೊಸ ಪ್ರಾಜೆಕ್ಟ್ ಸಿಎಂ ತರುತ್ತಾರೆ. ನಮ್ಮ ಸಮುದಾಯದ ವತಿಯಿಂದ ಭಾಗವಹಿಸಬೇಕಾ..? ಬೇಡವಾ..? ಅನ್ನೋದು ಜನರಿಗೆ ಬಿಟ್ಟಿದ್ದು. ಆದರೆ ಸಮೀಕ್ಷೆಗೆ ಸರ್ಕಾರ ಯಾವುದೇ ಸಿದ್ಧತೆ ಮಾಡಿಲ್ಲ. ಆಡಳಿತ ವೈಫಲ್ಯವನ್ನು ಬೇರೆಡೆ ಸೆಳೆಯೋಕೆ ಈ ಗಣತಿ ಮಾಡ್ತಿದ್ದಾರೆ. ಜನರ ಗಮನ ಬೆರೆ ಕಡೆ ಸೆಳೆಯೋಕೆ ಸಮೀಕ್ಷೆ ತಂತ್ರ ಅಷ್ಟೇ. ಎರಡು ದಿನ ಆಪ್ ಸರಿಯಾಗಿ ವರ್ಕ್ ಆಗಿಲ್ಲ. 15ರ ಒಳಗೆ ಗಣತಿ ಮುಗಿಸಬೇಕು ಅಂತಾರೆ. ಮನೆಯಲ್ಲಿ ಕೂತು ಸಮೀಕ್ಷೆ ಬರೆಯೋದು ಅಷ್ಟೇ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.
