ಉದಯವಾಹಿನಿ, ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸಿಎಂ ಮನೆಯಲ್ಲಿ ಕೂತು ಡಿಸಿಗಳಿಗೆ ಹೇಳಿದ್ರೆ ಕೆಲಸ ಮಾಡ್ತಾರಾ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹೆಚ್‌ಡಿಕೆ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಲೋಪಗಳ ಬಗ್ಗೆ ಚರ್ಚೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೇನೆ. ಉತ್ತರ ಭಾರತದಲ್ಲಿ ಪ್ರವಾಹ ಪರಿಸ್ಥಿತಿ ನೋಡಿದ್ದೀರಿ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಪ್ರಾರಂಭವಾಯ್ತು. ಹಲವಾರು ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ರೈತರು ಸೇರಿ ಎಲ್ಲರೂ ಸಂತೋಷದಲ್ಲಿದ್ದರು. ಕೃಷಿ ಚಟುವಟಿಕೆಗಳು ಆರಂಭವಾಗಿದ್ದವು, ಉತ್ತಮ ಬೆಳೆ ನಿರೀಕ್ಷೆ ಇತ್ತು. ಈಗ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿ, ಕಾರವಾರ, ಚಿಕ್ಕಮಗಳೂರು ಕಡೆ ಮೊದಲು ಪ್ರವಾಹ ಆಯ್ತು. ಈಗ ಹೈದ್ರಾಬಾದ್, ಮುಂಬೈ ಕರ್ನಾಟಕದಲ್ಲಿ ನಿರೀಕ್ಷೆ ಮೀರಿ ಮಳೆಯಾಗುತ್ತಿದೆ. ಹಲವಾರು ಹಳ್ಳಿಗಳು ಜಲಾವೃತವಾಗಿವೆ. ಆರು ಜಿಲ್ಲೆಗಳ ಅಧಿಕಾರಿಗಳ ಜೊತೆಗೆ ಪರಿಸ್ಥಿತಿ ಚರ್ಚೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿದೆ. ಭತ್ತ, ಹತ್ತಿ, ತೊಗರಿ ಬೆಳೆ ನಾಶವಾಗಿದೆ. ರೈತ ಚೇತರಿಸಿಕೊಳ್ಳಲು ಆಗುವುದಿಲ್ಲ. ಕಲ್ಯಾಣ ಕರ್ನಾಟಕದ ರೈತರು ನೋವಿನಲ್ಲಿದ್ದಾರೆ.
ಮಂತ್ರಿಗಳು ಕಾಟಾಚಾರಕ್ಕೆ ಹೋಗಿದ್ದಾರೋ ಬಿಟ್ಟಿದ್ದಾರೋ ನಾನು ಅದನ್ನು ಮಾತನಾಡುವುದಿಲ್ಲ. 36 ಜನರು ಮಂತ್ರಿಗಳಿದ್ದಾರೆ, ಎಲ್ಲೆಲ್ಲಿ ಭೇಟಿ ಕೊಟ್ಟಿದ್ದಾರೆ. ಸಿಎಂ ಬೆಂಗಳೂರಿನಲ್ಲಿ ಕೂತು ಡಿಸಿಗಳಿಗೆ ನಿರ್ದೇಶನ ನೀಡಿದ್ರೆ ಅವರು ಕೆಲಸ ಮಾಡ್ತಾರ? ಚಿಕ್ಕಮಗಳೂರು ಭಾಗದಲ್ಲಿ ಅಡಿಕೆ ನಾಶ ಆಯ್ತು, ಮನೆ ಕುಸಿದವು. ಪ್ರಾಣ ಹೋದ ವ್ಯಕ್ತಿಗೆ ಪರಿಹಾರ ಕೊಟ್ಟಿದ್ದು ಬಿಟ್ಟು ಉಳಿದವರಿಗೆ ಸರ್ಕಾರ ಏನು ನೆರವು ನೀಡಿದೆ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!