ಉದಯವಾಹಿನಿ, ಮಹಾನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದ ದಿನೇ ದಿನೇ ಟ್ರಾಫಿಕ್ ಹೆಚ್ಚಾಗುತ್ತಲೇ ಇದೆ. ಈ ಟ್ರಾಫಿಕ್ ನಿಯಂತ್ರಣಕ್ಕಾಗಿ ಹೊಸ ಹೊಸ ರೀತಿಯ ಯೋಜನೆಗಳನ್ನು ಕೂಡ ಹಾಕಿಕೊಳ್ಳಲಾಗುತ್ತದೆ. ಉದಾಹರಣೆಗೆ ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ಇನ್ನಿತರ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೌದು, ದೇಶದ ವಿವಿಧೆಡೆ ಟ್ರಾಫಿಕ್ ನಿಯಂತ್ರಣಕ್ಕಾಗಿ ಮೆಟ್ರೋ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹೀಗಿರುವಾಗ ಮುಂಬೈ ಮಹಾನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕಾಗಿ ಪಾಡ್ ಟ್ಯಾಕ್ಸಿ ಜಾರಿಗೆ ತರಲು ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಇತ್ತೀಚಿಗೆ ಮಾತನಾಡಿ, ಬುಲೆಟ್ ರೈಲು ನಿಲ್ದಾಣ ಮತ್ತು ಹೈಕೋರ್ಟ್ ಮಧ್ಯ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರ್ಲಾ ಮತ್ತು ಬಾಂಧ್ರಾ ರೈಲು ನಿಲ್ದಾಣಗಳ ಮಧ್ಯೆ ಪಾಡ್ ಟ್ಯಾಕ್ಸಿ ನಿರ್ಣಾಯಕ ಕಾರ್ಯ ನಿರ್ವಹಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈ ನಗರದಾದ್ಯಂತ ಈಗಾಗಲೇ ಟ್ರಾಫಿಕ್ ನಿಯಂತ್ರಣಕ್ಕಾಗಿ ಹಾಗೂ ಸಾರಿಗೆ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಈ ಪಾಡ್ ಟ್ಯಾಕ್ಸಿ ಸೇವೆಯನ್ನ ಪರಿಚಯಿಸಲಾಗುವುದೆಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮುಂಬೈ ಹೈಕೋರ್ಟ್ ಹಾಗೂ ಬುಲೆಟ್ ರೈಲು ನಿಲ್ದಾಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕುರ್ಲಾ ಹಾಗೂ ಬಾಂಧ್ರಾ ರೈಲು ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ. ಈ ಹಿನ್ನೆಲೆ ಪಾಡ್ ಟ್ಯಾಕ್ಸಿ ಸೇವೆಯಿಂದ ಈ ನಿಲ್ದಾಣಗಳ ನಡುವಿನ ಜನಸಂದಣಿ ಕಡಿಮೆ ಹಾಗೂ ಸೇವೆ ಕಲ್ಪಿಸಲು ಸಹಾಯಕವಾಗುತ್ತದೆ.
ಬಾಂದ್ರಾ ಮತ್ತು ಕುರ್ಲಾ ರೈಲು ನಿಲ್ದಾಣವು ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈ ಸ್ಪೀಡ್ ರೈಲು ಕಾರಿಡಾರ್ ನ ಆರು ಪ್ಲಾಟ್ಫಾರ್ಮ್ ಗಳನ್ನು ಹೊಂದಿರುವ ಭೂಗತ ರೈಲು ನಿಲ್ದಾಣವಾಗಿದೆ. ಅಲ್ಲದೆ ಮುಂಬೈನಲ್ಲಿ ಅಸ್ತಿತ್ವದಲ್ಲಿರುವ ಕೋರ್ಟ್ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆ ಇರುವುದರಿಂದ ಪೂರ್ವ ಬಾಂಧ್ರಾದಲ್ಲಿ 30 ಎಕರೆಗಳಲ್ಲಿ ಹೊಸ ಹೈಕೋರ್ಟ್ ನಿರ್ಮಿಸಲು ಯೋಜಿಸಲಾಗಿದೆ.
