ಉದಯವಾಹಿನಿ, ಸಿಡೋರ್ಜೋ : ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿದಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. 65ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಅವಶೇಷಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ರಕ್ಷಣಾ ತಂಡ ಆಮ್ಲಜನಕ ಮತ್ತು ನೀರನ್ನು ಪೂರೈಸುತ್ತಿದೆ. ಪೂರ್ವ ಜಾವಾದ ಸಿಡೋರ್ಜೊ ಪಟ್ಟಣದ ಅಲ್ ಖೋಜಿನಿ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯ ಕಟ್ಟಡ ಕುಸಿದಿದೆ. ಪೋಷಕರು ಕಟ್ಟಡದ ಕೆಳಗೆ ಬಂದು ಮಕ್ಕಳಿಗಾಗಿ ಹುಡುಕಾಡುತ್ತಿದ್ದಾರೆ, ಎಲ್ಲಿದ್ದೀಯಾ, ನನ್ನ ಮಾತು ಕೇಳಿಸ್ತಿದೆಯಾ ಒಮ್ಮೆ ಓ ಎಂದುಬಿಡು ಎಂದು ತಾಯಂದಿರು ಮಕ್ಕಳಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಹಲವು ವಿದ್ಯಾರ್ಥಿಗಳಿಗೆ ಪೆಟ್ಟಾಗಿದೆ, ಮೂಳೆಗಳು ಮುರಿದಿವೆ, ತಲೆಗೂ ಪೆಟ್ಟು ಬಿದ್ದಿದೆ.
