ಉದಯವಾಹಿನಿ, ಒಟ್ಟಾವಾ: ಭಾರತದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ದೇಶದ ಕ್ರಿಮಿನಲ್ ಕೋಡ್ ಅಡಿಯಲ್ಲಿ ಕೆನಡಾ ಭಯೋತ್ಪಾದಕ ಗುಂಪು ಎಂದು ಪಟ್ಟಿ ಮಾಡಿದೆ ಎಂದು ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ ಸೋಮವಾರ ಘೋಷಿಸಿದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೊಲೆ, ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದು ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದನ್ನು ಕೆನಡಾದಲ್ಲಿ ಎಂದಿಗೂ ಸಹಿಸಲಾಗುವುದಿಲ್ಲ ಎಂದು ಅವರು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಯೋತ್ಪಾದಕ ಗುಂಪಿನಡಿ ಸೇರ್ಪಡೆಯಾಗಿದೆ. ಈ ಗ್ಯಾಂಗ್‌ನ ಚಟುವಟಿಕೆಗಳು ಭಯ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಲು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.
ಬಿಷ್ಣೋಯ್ ಗ್ಯಾಂಗ್, ಅದರ ನಾಯಕ ಲಾರೆನ್ಸ್ ಬಿಷ್ಣೋಯ್ ಹೆಸರಿನಿಂದ ಕರೆಯಲ್ಪಡುತ್ತದೆ. ಇದು ಭಾರತ ಮತ್ತು ವಿದೇಶಗಳಲ್ಲಿ ಸುಲಿಗೆ, ಕಳ್ಳಸಾಗಣೆ ಮತ್ತು ಕೊಲೆ ಸೇರಿದಂತೆ ಹಲವು ಬಹುದೊಡ್ಡ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿವೆ ಎಂದು ತಿಳಿಸಿದ್ದಾರೆ.
ಬಿಷ್ಣೋಯ್ ಗ್ಯಾಂಗ್ ಅನ್ನು ಭಯೋತ್ಪಾದಕ ಗುಂಪೆಂದು ಪಟ್ಟಿ ಮಾಡುವ ಮೂಲಕ ಇದೀಗ ಕೆನಡಾದ ಅಧಿಕಾರಿಗಳು ಅದರ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಲವಾದ ಕಾನೂನು ಪಡೆದಿದ್ದಾರೆ. ಈ ಕಾನೂನಿನ ಮೂಲಕ ಅವರ ಆಸ್ತಿ, ವಾಹನಗಳು, ಹಣ ಸೇರಿದಂತೆ ಗುಂಪಿನ ಒಡೆತನದ ಅಥವಾ ನಿಯಂತ್ರಿಸಲ್ಪಡುವ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಅನುಮತಿ ಇದೆ. ಭಯೋತ್ಪಾದಕ ಹಣಕಾಸು, ಪ್ರಯಾಣ ಮತ್ತು ನೇಮಕಾತಿಗೆ ಸಂಬಂಧಿಸಿದ ಕ್ರಿಮಿನಲ್ ಆರೋಪಗಳನ್ನು ಮುಂದುವರಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಇದು ಅನುವು ಮಾಡಿಕೊಡುತ್ತದೆ.
