ಉದಯವಾಹಿನಿ, ನವದೆಹಲಿ: ಪೋಷಕರೇ ನಿಮ್ಮ ಮಕ್ಕಳಿಗೆ ಕೆಮ್ಮು, ಶೀತ ಅಂತ ಸಿರಾಪ್ ಕೊಡುವ ಮುನ್ನ ಹುಷಾರ್. ಅದೇ ಸಿರಾಪ್ ರಾಜಸ್ಥಾನ, ಮಧ್ಯಪ್ರದೇಶದಲ್ಲಿ 11 ಮಕ್ಕಳನ್ನ ಬಲಿ ಪಡೆದಿದ್ದು, ದೇಶದ್ಯಾಂತ ಆತಂಕ ಸೃಷ್ಟಿಸಿದೆ. ಇದೀಗ ಕೇಂದ್ರ ಆರೋಗ್ಯ ಇಲಾಖೆ ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.
ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿದ ಬೆನ್ನಲ್ಲೇ ಅಲರ್ಟ್ ಆದ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. 2 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೆಮ್ಮು, ಶೀತಗಳಿಗೆ ಸಿರಪ್‍ನ್ನು ಶಿಪಾರಸು ಮಾಡದಂತೆ ಸೂಚನೆ ನೀಡಲಾಗಿದೆ. ಕೇಂದ್ರದ ಸೂಚನೆ ಬೆನ್ನಲ್ಲೇ ರಾಜ್ಯದಲ್ಲೂ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಮಕ್ಕಳ ಸಾವಿಗೆ ಕಾರಣವಾದ ಸಿರಪ್ ಲಭ್ಯವಿರುವ ಬಗ್ಗೆ ಮಾಹಿತಿ ಕೇಳಿದೆ. ರಾಜಸ್ಥಾನದಲ್ಲಿ ಸಾವಿಗೆ ಕಾರಣವಾದ ಸಿರಪ್‍ನ ಬ್ಯಾಚ್ ನಮ್ಮ ಕರ್ನಾಟಕದಲ್ಲಿ ಲಭ್ಯವಿಲ್ಲ ಅಂತ ರಾಜ್ಯ ಔಷಧ ನಿಯಂತ್ರಣ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ನಮ್ಮ ರಾಜ್ಯದ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ನಿಗಾ ವಹಿಸಲು ಹೇಳಿದ್ದೇನೆ. ನಮ್ಮ ರಾಜ್ಯಕ್ಕೆ ಆ ಕೋಲ್ಡ್ ಸಿರಪ್ ಸಪ್ಲೈ ಇಲ್ಲ. ಖಾಸಗಿಯಾಗಿ ತರಿಸಿಕೊಂಡಿದ್ದಾರಾ ಎಂಬ ಬಗ್ಗೆ ಪರೀಶೀಲನೆ ಮಾಡುವಂತೆ ಸೂಚಿಸಿದ್ದೇನೆ. ನಮ್ಮ ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಪ್ರತಿ ತಿಂಗಳು ಗುಣಮಟ್ಟದ ಪರೀಕ್ಷೆ ಮಾಡುತ್ತದೆ. ನಾವು ತೆಗೆದುಕೊಂಡಿರುವಷ್ಟರು ಕ್ರಮ ಬೇರೆ ಯಾವ ರಾಜ್ಯದವರು ತೆಗೆದುಕೊಂಡಿಲ್ಲ. ಹೀಗಾಗಿ ಪೋಷಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದಿದ್ದಾರೆ.
ಇನ್ನು ಕೆಮ್ಮಿನ ಸಿರಪ್‍ನಿಂದಾಗಿ ಸಾವು ಪ್ರಕರಣದ ಸಂಬಂಧ ಕೇಂದ್ರದ ಮಾರ್ಗಸೂಚಿಗೆ ಸಚಿವ ಮಹದೇವಪ್ಪ ಟೀಕಿಸಿದ್ದಾರೆ. ಮಕ್ಕಳ ಸಾವು ವಿಷಾದಕರ, ಮಕ್ಕಳ ಸಾವಿನ ಮೊದಲೇ ಈ ಕ್ರಮ ತೆಗೆದುಕೊಳ್ಳಬೇಕಿತ್ತು. ಮಾರುಕಟ್ಟೆಗೆ ಔಷಧ ಬಿಡುವ ಮುನ್ನವೇ ಪರೀಕ್ಷೆ ಮಾಡಬೇಕಿತ್ತು. ಈಗ ಅದನ್ನ ಬಳಸಬೇಡಿ ಎಂದು ಕೇಂದ್ರ ಹೇಳಿರುವುದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.
