ಉದಯವಾಹಿನಿ, ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ) ಇಂದು ಪರಿಶೀಲನಾ ಸಭೆ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ಪಾಟ್ನಾಗೆ ತೆರಳಿರುವ ನಿಯೋಗ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸಿದೆ.
ಪಾಟ್ನಾದ ತಾಜ್ ಹೋಟೆಲ್‌ನಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅಧ್ಯಕ್ಷತೆ ಹಾಗೂ ಚುನಾವಣಾ ಆಯುಕ್ತ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಉಪಸ್ಥಿತಿಯಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಇಸಿಐ ಅಧಿಕಾರಿಗಳು, ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಗುಂಜ್ಯಾಲ್ ಹಾಗೂ ರಾಜ್ಯದ ಎಲ್ಲಾ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬಿಹಾರ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವಂತೆ ಜೆಡಿಯು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಥವಾ ನಕ್ಸಲ್ ಸಮಸ್ಯೆಗಳಿಲ್ಲ ಹೀಗಾಗಿ ಒಂದೇ ಹಂತದಲ್ಲಿ ಮತದಾನ ನಡೆಯಬೇಕು. ಛತ್ ಪೂಜಾ ಸಮಯದಲ್ಲಿ ಅನೇಕ ಜನರು ಮನೆಗೆ ಮರಳುತ್ತಾರೆ. ಆದ್ದರಿಂದ ಆ ಸಮಯದಲ್ಲಿ ಚುನಾವಣೆಯನ್ನು ನಡೆಸಬೇಕು ಎಂದು ಮನವಿ ಮಾಡಿದೆ. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಎಲ್ಲಾ ಪಕ್ಷಗಳು ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯೋಗ ಆಯುಕ್ತರು ಸಭೆಯಲ್ಲಿ ಹೇಳಿದರು. ಚುನಾವಣೆಯನ್ನು ಸಾಮರಸ್ಯದಿಂದ ನಡೆಸುವ ಜೊತೆಗೆ ಮತದಾರರನ್ನೂ ಗೌರವಿಸಬೇಕು ಎಂದು ಆಯೋಗ ತಿಳಿಸಿದೆ.
