ಉದಯವಾಹಿನಿ, ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪಾಕಿಸ್ತಾನ ಅಧಿಕಾರಿಗಳು ನಡೆಸಿರುವ ದಮನಕಾರಿ ಕ್ರಮವನ್ನು ಭಾರತ ಖಂಡಿಸಿದೆ. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಸುಮಾರು ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಇದು ಅಧಿಕಾರಿಗಳ ದಬ್ಬಾಳಿಕೆಯನ್ನು ತೋರಿಸಿದೆ. ಅಲ್ಲದೇ ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಶುಕ್ರವಾರ ಭಾರತ ಒತ್ತಾಯಿಸಿದೆ.ನಾಗರಿಕ ಸಂಘಟನೆಗಳು ಮತ್ತು ವ್ಯಾಪಾರಿಗಳನ್ನು ಪ್ರತಿನಿಧಿಸುವ ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿಯು (ಜೆಎಎಸಿ) ಸರ್ಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳಿಗೆ ವಿಶೇಷ ಸವಲತ್ತುಗಳನ್ನು ಕೊನೆಗೊಳಿಸಬೇಕು ಮತ್ತು ಜಮ್ಮು ಕಾಶ್ಮೀರದ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳನ್ನು ಪ್ರಾರಂಭಿಸಿತ್ತು. ಈ ವೇಳೆ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಮಿಲಿಟರಿ ಬಲಪ್ರಯೋಗವನ್ನು ಮಾಡಿದೆ. ಇದು ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿತ್ತು.
