ಉದಯವಾಹಿನಿ, ಡೆಹ್ರಾಡೂನ್‌: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಉಂಟಾದ ಅಪಘಾತದಿಂದ ಪತ್ರಕರ್ತನೊಬ್ಬ ಸಾವನ್ನಪ್ಪಿದ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ಡಿಜಿಟಲ್ ಪತ್ರಕರ್ತ ರಾಜೀವ್ ಪ್ರತಾಪ್ (36) ಅವರ ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದ್ದರಿಂದ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಅವರು ಕುಡಿದು ವಾಹನ ಚಲಾಯಿಸುತ್ತಿದ್ದುದರಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಗುರುವಾರ ಹೇಳಿದೆ. ಹೀಗಾಗಿ ಅವರ ಸಾವಿನ ಕುರಿತು ಅನುಮಾನ ಪಡುವಂತ ಯಾವುದೇ ಸಂಗತಿಗಳು ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಕಾಶಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಅಕ್ರಮಗಳ ಕುರಿತು ವರದಿ ಮಾಡಿದ್ದಕ್ಕಾಗಿ ಪ್ರತಾಪ್ ಅವರ ಹತ್ಯೆಯಾಗಿದೆ ಎಂದು ಅವರ ಕುಟುಂಬ ಆರೋಪಿಸಿದ್ದು, ಇದನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ಪ್ರತಾಪ್ ಅವರಿಗೆ ಅನೇಕ ಬೆದರಿಕೆ ಕರೆಗಳು ಬಂದಿದ್ದವು ಎಂದು ಕುಟುಂಬವು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿವೆ.ಡೆಹ್ರಾಡೂನ್ ನಿವಾಸಿಯಾಗಿರುವ ಪ್ರತಾಪ್ ಸೆಪ್ಟೆಂಬರ್ 18ರಂದು ರಾತ್ರಿ ನಾಪತ್ತೆಯಾಗಿದ್ದರು. ಅವರ ಮೃತದೇಹ ಸೆಪ್ಟೆಂಬರ್ 28ರಂದು ಜೋಶಿಯಾಡಾ ಬ್ಯಾರೇಜ್‌ನಲ್ಲಿ ಪತ್ತೆಯಾಗಿತ್ತು. ಭಾರತೀಯ ಸಮೂಹ ಸಂವಹನ ಸಂಸ್ಥೆಯ (ಐಐಎಂಸಿ) ಪದವೀಧರರಾಗಿದ್ದ ಅವರು ಯೂಟ್ಯೂಬ್ ಸುದ್ದಿ ಚಾನೆಲ್ ದೆಹಲಿ ಉತ್ತರಾಖಂಡ್ ಲೈವ್‌ನ ಸ್ಥಾಪಕರಾಗಿದ್ದರು.ಘಟನೆಯ ಕುರಿತು ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದ ತನಿಖಾ ತಂಡ ಇದೊಂದು ಅಪಘಾತ ಎಂದು ತೀರ್ಮಾನಿಸಿದೆ ಎಂಬುದಾಗಿ ವಿಶೇಷ ತನಿಖಾ ತಂಡದ ಮುಖ್ಯಸ್ಥ ಉಪ ಪೊಲೀಸ್ ವರಿಷ್ಠಾಧಿಕಾರಿ ಜನಕ್ ಪನ್ವರ್ ತಿಳಿಸಿದ್ದಾರೆ.
ಅವರ ಕಾರು ರಸ್ತೆಯಿಂದ ಇಳಿದು ಭಾಗೀರಥಿ ನದಿಗೆ ಬಿದ್ದಿತ್ತು. ಇದಕ್ಕೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದುದೇ ಕಾರಣ ಎಂದು ಪನ್ವರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!