ಉದಯವಾಹಿನಿ, ನವದೆಹಲಿ: 2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ಸ್‌ನಲ್ಲಿ ಭಾರತ ತನ್ನ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ಭಾನುವಾರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ ಭಾರತ 22 ಪದಕಗಳನ್ನು (6 ಚಿನ್ನ, 9 ಬೆಳ್ಳಿ, 7 ಕಂಚು) ಗೆದ್ದು 10ನೇ ಸ್ಥಾನ ಗಳಿಸಿತು. 22 ಪದಕಗಳ ಜೊತೆಗೆ, ಭಾರತೀಯ ಕ್ರೀಡಾಪಟುಗಳು ಮೂರು ಚಾಂಪಿಯನ್‌ಶಷಿಪ್ ದಾಖಲೆಗಳು, ಏಳು ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದರು ಮತ್ತು ಒಂಬತ್ತು ಬಾರಿ ನಾಲ್ಕನೇ ಸ್ಥಾನ ಪಡೆದರು. ದೇಶದ ಮೊದಲ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 30 ಕ್ಕೂ ಹೆಚ್ಚು ವೈಯಕ್ತಿಕ ಅತ್ಯುತ್ತಮ ಸಾಧನೆಗಳು ಮೂಡಿ ಬಂದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಅಥ್ಲಿಟ್‌ಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ.

“ಈ ವರ್ಷದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಬಹಳ ವಿಶೇಷವಾದದ್ದು. ಭಾರತೀಯ ತಂಡ 6 ಚಿನ್ನ ಸೇರಿದಂತೆ 22 ಪದಕಗಳನ್ನು ಗೆದ್ದು ತನ್ನ ಅತ್ಯುತ್ತಮ ಪ್ರದರ್ಶನವನ್ನು ತೋರಿದೆ. ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಅವರ ಯಶಸ್ಸು ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಅವರ ಭವಿಷ್ಯದ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇನೆ,” ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.”ಈ ಕ್ರೀಡಾಕೂಟವನ್ನು ದೆಹಲಿಯಲ್ಲಿ ಆಯೋಜಿಸುವುದು ಭಾರತಕ್ಕೆ ಗೌರವವಾಗಿದೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸುಮಾರು 100 ದೇಶಗಳ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 15 ಚಿನ್ನ, 20 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 44 ಪದಕಗಳೊಂದಿಗೆ ಬ್ರೆಜಿಲ್ ಈ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಗಳಿಸಿತು. ಚೀನಾ 13 ಚಿನ್ನ, 22 ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಇರಾನ್ 9 ಚಿನ್ನ, 2 ಬೆಳ್ಳಿ ಮತ್ತು 5 ಕಂಚಿನೊಂದಿಗೆ ಮೂರನೇ ಸ್ಥಾನ ಪಡೆಯಿತು.

Leave a Reply

Your email address will not be published. Required fields are marked *

error: Content is protected !!