ಉದಯವಾಹಿನಿ, ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ 2025 ರ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸತತ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿದ್ದ ಭಾರತ, ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣ್ಣು ಮುಕ್ಕಿಸಿತ್ತು. ಇದೀಗ ತನ್ನ ಮೂರನೇ ಪಂದ್ಯಕ್ಕೆ ಸಜ್ಜಾಗಿರುವ ಹರ್ಮನ್‌ಪ್ರೀತ್ ಕೌರ್ ಪಡೆ ತನ್ನ ಮುಂದಿನ ಸವಾಲಾಗಿ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿದೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಗೆಲುವಿನೊಂದಿಗೆ ಬರುತ್ತಿರುವ ಕಾರಣ ಟೀಂ ಇಂಡಿಯಾ ಬಹಳ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
ಸ್ಮೃತಿ- ಬ್ರಿಟ್ಸ್ ಮುಖಾಮುಖಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾದಾಗ, ಎಲ್ಲರ ಕಣ್ಣುಗಳು ಸ್ಮೃತಿ ಮಂಧಾನ ಮತ್ತು ತಜ್ಮಿನ್ ಬ್ರಿಟ್ಸ್ ಮೇಲೆ ಇರುತ್ತವೆ. ಈ ಇಬ್ಬರು ಆಟಗಾರ್ತಿಯರು ಈ ವರ್ಷದ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಮತ್ತು ಅತ್ಯಧಿಕ ಶತಕ ಬಾರಿಸಿದ್ದಾರೆ. ಸ್ಮೃತಿ ಮಂಧಾನ ನಾಲ್ಕು ಶತಕಗಳು ಸೇರಿದಂತೆ 800 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇತ್ತ ಹಿಂದಿನ ಪಂದ್ಯದಲ್ಲಿ ತಜ್ಮಿನ್ ಬ್ರಿಟ್ಸ್ ಒಂದೇ ವರ್ಷದಲ್ಲಿ ಐದು ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಒಟ್ಟಾರೆಯಾಗಿ, ಈ ಇಬ್ಬರ ನಡುವಿನ ಸ್ಪರ್ಧೆಯು ವಿಶಿಷ್ಟ ರೋಮಾಂಚನವನ್ನು ಸೃಷ್ಟಿಸುತ್ತದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಲಿದೆ. ಅಕ್ಟೋಬರ್ 9 ರಂದು ನಡೆಯಲಿರುವ ಈ ಪಂದ್ಯದ ಆನ್‌ಲೈನ್ ಸ್ಟ್ರೀಮಿಂಗ್ ಅನ್ನು ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.
