ಉದಯವಾಹಿನಿ, ರಾಜ್ಮಾ ಧಾನ್ಯವನ್ನು ‘ಕಿಡ್ನಿ ಬೀನ್ಸ್’ ಎಂದೂ ಕರೆಯುತ್ತಾರೆ. ಅವುಗಳಲ್ಲಿರುವ ಪ್ರೋಟೀನ್‌ಗಳು, ಫೈಬರ್‌ಗಳು, ವಿಟಮಿನ್ಸ್, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಇವು ದೇಹದಲ್ಲಿ ಕೊಬ್ಬು ಮತ್ತು ಲಿಪಿಡ್‌ಗಳ ಸಂಗ್ರಹವನ್ನು ತಡೆಯುತ್ತವೆ. ದೇಹದ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕ ಹಾಗೂ ಉರಿಯೂತದ ಗುಣಲಕ್ಷಣಗಳು ಮಧುಮೇಹ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆ ಮಾಡುತ್ತದೆ. ರಾಜ್ಮಾದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ರಾಜ್ಮಾ ತಿನ್ನುವುದರಿಂದ ಅನೇಕರಿಗೆ ಜೀರ್ಣಕಾರಿ ಸಮಸ್ಯೆಗಳು, ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ಸರಿಯಾಗಿ ಬೇಯಿಸದಿದ್ದರೆ ಅಥವಾ ಅತಿಯಾಗಿ ಸೇವಿಸಿದರೆ ಮಾತ್ರ ಈ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ಇವುಗಳನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಸೇವಿಸುವುದರಿಂದ ದೇಹಕ್ಕೆ ಅನೇಕ ಪೋಷಕಾಂಶಗಳು ದೊರೆಯುತ್ತವೆ ಎಂದು ತಜ್ಞರು ಹೇಳುತ್ತಾರೆ.
ರಾಜ್ಮಾದಲ್ಲಿರುವ ಪೌಷ್ಟಿಕಾಂಶಗಳು: ಅಮೆರಿಕ ಕೃಷಿ ಇಲಾಖೆಯ ಪ್ರಕಾರ, 100 ಗ್ರಾಂ ರಾಜ್ಮಾದಲ್ಲಿ ಹಲವು ಪೋಷಕಾಂಶಗಳಿವೆ.ರಾಜ್ಮಾ ಧಾನ್ಯದ ಆರೋಗ್ಯ ಪ್ರಯೋಜನಗಳು
ರಾಜ್ಮಾ ಧಾನ್ಯ (Getty Images)
ಪ್ರೋಟೀನ್: 7.69 ಗ್ರಾಂ
ಕಾರ್ಬೋಹೈಡ್ರೇಟ್ಸ್: 21.5 ಗ್ರಾಂ
ನಾರು: 5.4 ಗ್ರಾಂ
ಕ್ಯಾಲ್ಸಿಯಂ: 46 ಮಿಲಿಗ್ರಾಂ
ಕಬ್ಬಿನಂಶ: 1.38 ಮಿಲಿಗ್ರಾಂ
ಪೊಟ್ಯಾಸಿಯಮ್: 215 ಮಿಲಿಗ್ರಾಂ
ಕ್ಯಾಲೋರಿಗಳು: 123 ಕ್ಯಾಲೋರಿಗಳು
ಫೋಲೇಟ್(ವಿಟಮಿನ್ ಬಿ 9): 130 ಮೈಕ್ರೋಗ್ರಾಂಗಳು
ಮೆಗ್ನೀಸಿಯಮ್: 45 ಮಿಲಿಗ್ರಾಂ
ರಾಜ್ಮಾ ಧಾನ್ಯದ ಆರೋಗ್ಯದ ವಿವಿಧ ಪ್ರಯೋಜನಗಳೇನು?:
ಸಮೃದ್ಧ ಪ್ರೋಟೀನ್: ರಾಜ್ಮಾ ಸಸ್ಯ ಆಧಾರಿತ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದು ಸಸ್ಯಾಹಾರಿಗಳಿಗೆ ಉತ್ತಮ ಆಯ್ಕೆ. ಹೆಚ್ಚಿನ ಪ್ರೋಟೀನ್ ಅಂಶದಿಂದಾಗಿ ಇದು ಸ್ನಾಯುಗಳ ಬೆಳವಣಿಗೆ ಹಾಗೂ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೂಕ ಇಳಿಸಲು ಸಹಾಯ: ರಾಜ್ಮಾ ಕಡಿಮೆ ಕೊಬ್ಬಿನಂಶ, ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರವಾಗಿದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಪ್ರೋಟೀನ್ ಚಯಾಪಚಯ ಹೆಚ್ಚಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಅಧ್ಯಯನವು, ರಾಜ್ಮಾ ಕಡಿಮೆ ಸಮಯದಲ್ಲಿ ತೂಕ ನಷ್ಟಕ್ಕೆ ಗಮನಾರ್ಹವಾಗಿ ಉತ್ತೇಜಿಸುತ್ತದೆ ಎಂದು ಬಹಿರಂಗಪಡಿಸುತ್ತದೆ.
ಮಧುಮೇಹ ನಿಯಂತ್ರಣ: ರಾಜ್ಮಾ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ. ಅಲ್ಲದೆ ಹಲವಾರು ಅಧ್ಯಯನಗಳು ತಿಳಿಸುವ ಪ್ರಕಾರ, ಟೈಪ್ 2 ಮಧುಮೇಹ ಇರುವವರಿಗೆ ತುಂಬಾ ಒಳ್ಳೆಯದು ಎಂದು ತಿಳಿಸಿದೆ.
ಹೃದಯದ ಆರೋಗ್ಯ: ರಾಜ್ಮಾದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇದ್ದು ಇದರಲ್ಲಿರುವ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯ ಕಾಯಿಲೆ ಹಾಗೂ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆ ಬೆಂಬಲಿಸುತ್ತದೆ: ರಾಜ್ಮಾದಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿ ಕಾರ್ಯನಿರ್ವಹಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಅಪಾಯ ಕಡಿಮೆ: ರಾಜ್ಮಾದಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ, ಕ್ಯಾನ್ಸರ್ ನಿವಾರಕ, ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಲಿಗ್ನಾನ್‌ಗಳಂತಹ ಸಸ್ಯ ಸಂಯುಕ್ತಗಳಿವೆ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ.
