ಉದಯವಾಹಿನಿ,ಬೆಂಗಳೂರು: ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ನಿಲುವಳಿ ಮಂಡಿಸಲಾಗಿದೆ. ನಿಲುವಳಿ ಮಂಡಿಸಿದ್ರು ಅವಕಾಶವನ್ನು ಸ್ಪೀಕರ್ ನೀಡುತ್ತಿಲ್ಲ ಎಂಬುದಾಗಿ ಆಕ್ರೋಶಗೊಂಡಿರುವಂತ ವಿಪಕ್ಷ ಸದಸ್ಯರು, ವಿಧಾನಸಭೆಯಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಈ ಬಗ್ಗೆ ಸದನದಲ್ಲಿ ಮಾತನಾಡಿದಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗ್ಯಾರಂಟಿ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ನಿಲುವಳಿಯನ್ನು ನೀಡಿದ್ದೇವೆ. ನಿಲುವಿಗೆ ಸೂಚನೆ ನೀಡಿದ ನಂತರವೂ ಸದನದಲ್ಲಿ ಗ್ಯಾರಂಟಿ ಬಗ್ಗೆ ಚರ್ಚಿಸಲು ಅವಕಾಶ ನೀಡದೇ ಇರುವುದು ಕೆಟ್ಟ ಸಂಪ್ರದಾಯ ಎಂದರು. ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದ ಜನತೆಗೆ ಯಾವ ರೀತಿ ಮೋಸ ಆಗಿದೆ ಎನ್ನುವ ಬಗ್ಗೆ ಚರ್ಚೆ ನಡೆಯಬೇಕು. ಮೊದಲು ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಅಂತ ಹೇಳಿದ್ರು.
ಆ ಬಳಿಕ ಗ್ಯಾರಂಟಿಗಳಿಗೆ ಷರತ್ತುಗಳನ್ನು ಜಾರಿಗೊಳಿಸಿದ್ರು ಎಂಬುದಾಗಿ ಗುಡುಗಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್, ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯಪಾಲರ ಭಾಷಣದಲ್ಲೇ ಎಲ್ಲಾ ಹೇಳಲಾಗಿದೆ. ಈಗ ಮತ್ತೆ ಚರ್ಚೆಗೆ ಅವಕಾಶ ನೀಡಿದರೇ ಸರಿಯಾದ ಸಂದೇಶ ಹೋಗಲ್ಲ. ಅಜೆಂಡಾ ಪ್ರಕಾರಲೇ ಎಲ್ಲ ನಡೆದಿದೆ ಎಂಬುದಾಗಿ ತಿಳಿಸಿದರು. ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ಚರ್ಚೆಗೆ ಅವಕಾಶ ನೀಡದ ಕಾರಣ ಸದನದಲ್ಲಿ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸದನದ ಭಾವಿಗೆ ಇಳಿದು ಆಡಳಿತ ಪಕ್ಷದ ವಿರುದ್ಧ ಘೋಷಣೆಯನ್ನು ಕೂಗುತ್ತಿದ್ದಾರೆ. ಹೀಗಾಗಿ ಕೆಲ ಕಾಲ ವಿಧಾನಸಭೆ ಕಲಾಪವನ್ನು ಕೂಡ ಸ್ಪೀಕರ್ ಯು.ಟಿ ಖಾದರ್ ಮುಂದೂಡಿಕೆ ಮಾಡಿದ್ದಾರೆ.
