ಉದಯವಾಹಿನಿ, ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ‘ಆಲಿಯಾ ಭಟ್’ ಹೆಸರಿನ ಹಸುವೊಂದನ್ನು ಭೇಟಿಯಾಗಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಭಾರಿ ವೈರಲ್ ಆಗಿದೆ. ಇತ್ತೀಚೆಗೆ ತಿರುವಂಬಾಡಿಯಲ್ಲಿರುವ ಕೊಡೆಂಚೆರ್ರಿ ಡೈರಿ ಫಾರ್ಮ್‌ಗೆ ಪ್ರಿಯಾಂಕ್ ಗಾಂಧಿ ಭೇಟಿ ನೀಡಿದ್ದರು. ಅಲ್ಲಿ ಬಾಲಿವುಡ್ ನಟಿ ‘ಆಲಿಯಾ ಭಟ್’ ಹೆಸರಿನ ಮುದ್ದಾದ ಹಸುವನ್ನು ಕಂಡು ಫುಲ್ ಖುಷ್ ಆಗಿದ್ದಾರೆ.
“ಕುಟುಂಬವೊಂದು ನಡೆಸುತ್ತಿರುವ ಸುಂದರವಾದ ಡೈರಿ ಫಾರ್ಮ್‌ನಲ್ಲಿ ರೈತರನ್ನು ಭೇಟಿಯಾದೆ. (ಅಲ್ಲಿ ‘ಆಲಿಯಾ ಭಟ್’ ಎಂಬ ಹಸುವನ್ನೂ ಭೇಟಿಯಾದೆ!, ಆಲಿಯ ಭಟ್ ಬಳಿ ಕ್ಷಮೆಯಾಚಿಸುತ್ತೇನೆ, ಆದರೆ, ಅವಳು ನಿಜಕ್ಕೂ ಮುದ್ದಾಗಿದ್ದಾಳೆ!),” ಎಂದು ಪ್ರಿಯಾಂಕಾ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಪ್ರಿಯಾಂಕಾ ಗಾಂಧಿ, ಸಹಕಾರಿ ಸಂಘಗಳು ಮತ್ತು ಸ್ಥಳೀಯ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ಹೈನುಗಾರಿಕೆಯಲ್ಲಿನ ಬಿಕ್ಕಟ್ಟುಗಳು, ಹೆಚ್ಚುತ್ತಿರುವ ವೆಚ್ಚಗಳು, ಕಾಡು ಪ್ರಾಣಿಗಳ ಉಪಟಳ ಸೇರಿದಂತೆ ರೈತರು ತಾವು ಎದಿರಿಸುತ್ತಿರುವ ಹಲವಾರು ತೊಂದರೆಗಳ ಬಗ್ಗೆ ಸಂಸದರ ಬಳಿ ಅಳಲನ್ನು ತೋಡಿಕೊಂಡಿದ್ದಾರೆ.
