ಉದಯವಾಹಿನಿ, ಜೈಪುರ: ಭೂಪ್ರದೇಶಕ್ಕಾಗಿ ತಾಯಿ ಮತ್ತು ಮಗಳ ನಡುವೆ ಭೀಕರ ಕಾದಾಟ ನಡೆದಿದೆ. ಇದು ಮನುಷ್ಯರ ನಡುವಿನ ಜಗಳವಲ್ಲ, ಇದು ಎರಡು ವ್ಯಾಘ್ರಗಳ ನಡುವಿನ ಕಾದಾಟ. ಮಂಗಳವಾರ ಬೆಳಗ್ಗೆ ರಾಜಸ್ಥಾನದ ರಣಥಂಬೋರ್ ಹುಲಿ ಅಭಯಾರಣ್ಯದಲ್ಲಿ ಅಪರೂಪದ ಮತ್ತು ಉಗ್ರ ಹೋರಾಟ ನಡೆಯಿತು. ಇದು ಪ್ರವಾಸಿಗರಿಗೆ ತಮ್ಮ ಜಂಗಲ್ ಸಫಾರಿಯ ಸಮಯದಲ್ಲಿ ಜೀವಮಾನದಲ್ಲಿ ಒಮ್ಮೆಯಾದರೂ ಸಿಗುವ ವನ್ಯಜೀವಿ ಅನುಭವವನ್ನು ನೀಡಿತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹಚ್ಚ ಹಸಿರಿನ ನಡುವೆ ಜನಪ್ರಿಯ ಹುಲಿ ರಿದ್ಧಿ ಮತ್ತು ಆಕೆಯ ಮಗಳು ಮೀರಾ ನಡುವೆ ಘರ್ಷಣೆ ನಡೆಯಿತು. ಮೀಸಲು ಪ್ರದೇಶದ 3ನೇ ವಲಯದಲ್ಲಿ ಹಂಚಿಕೆಯಾದ ಪ್ರದೇಶದ ಮೇಲೆ ನಿಯಂತ್ರಣಕ್ಕಾಗಿ ಎರಡೂ ಹುಲಿಗಳು ಹೋರಾಡಿವೆ. ಸುಮಾರು ಎರಡು ನಿಮಿಷಗಳ ಕಾಲ ತೀವ್ರವಾದ ಮುಖಾಮುಖಿ ನಡೆಯಿತು. ಅಂತಿಮವಾಗಿ ತಾಯಿ ತನ್ನ ಮಗಳನ್ನು ಸೋಲಿಸಿದಳು. ಕಾದಾಟದ ಸಮಯದಲ್ಲಿ ಎರಡೂ ಹುಲಿಗಳು ಗಾಯಗೊಂಡವು.
ಈ ಕಾಳಗದ ದೃಶ್ಯವನ್ನು ಪ್ರವಾಸಿಗರೊಬ್ಬರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಗ್ಗಿನ ಸಫಾರಿಯ ಸಮಯದಲ್ಲಿ ಎರಡು ಹುಲಿಗಳು ಮೊದಲು ಪರಸ್ಪರ ಹತ್ತಿರದಲ್ಲಿ ಕಾಣಿಸಿಕೊಂಡವು. ಮೀರಾ ತನ್ನ ಪ್ರದೇಶವನ್ನು ಪಡೆಯಲು ಪ್ರಯತ್ನಿಸುತ್ತಾ ರಿದ್ಧಿಗೆ ಸವಾಲೊಡ್ಡಿದ್ದಾಗ ಉದ್ವಿಗ್ನತೆ ಉಂಟಾಯಿತು. ನಂತರ ನಡೆದದ್ದು ಭೀಕರ ಮತ್ತು ಜೋರಾದ ಕಾದಾಟ. ಕಾಡಿನಾದ್ಯಂತ ಹುಲಿಗಳ ಪ್ರಬಲ ಘರ್ಜನೆ ಪ್ರತಿಧ್ವನಿಸಿದೆ. ಹೋರಾಟ ಅಲ್ಪಕಾಲಿಕವಾಗಿದ್ದರೂ, ಅದು ಬಹಳ ತೀವ್ರವಾಗಿತ್ತು. ಎರಡು ಬೆಕ್ಕುಗಳು ಕಾದಾಟ ಮಾಡುವಂತೆ ಹುಲಿಗಳು ಅದಕ್ಕಿನ ದೊಡ್ಡ ಪ್ರಮಾಣದಲ್ಲಿ ಕಾದಾಟ ನಡೆಸಿವೆ. ಅಂತಿಮವಾಗಿ, ತಾಯಿ ಹುಲಿ ತನ್ನ ಮಗಳನ್ನು ಸೋಲಿಸಿ, ಮೀರಾಳನ್ನು ಕಾಡಿನೊಳಗೆ ಹಿಮ್ಮೆಟ್ಟುವಂತೆ ಮಾಡಿತು.

Leave a Reply

Your email address will not be published. Required fields are marked *

error: Content is protected !!