ಉದಯವಾಹಿನಿ, ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ವಾಹನ ಅಡ್ಡಗಟ್ಟಿ ತಮಿಳುನಾಡು ಮೂಲದ ಪಿಎಸ್‌ಐ ದರೋಡೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ದರೋಡೆಕೋರರನ್ನ ಬಂಧಿಸುವಲ್ಲಿ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಯದ್ ತನ್ವೀರ್ (30), ಫೈರೋಜ್ ಪಾಷ (28), ತನ್ವೀರ್ ಪಾಷ (32) ಬಂಧಿತ ಆರೋಪಿಗಳು. ಕಳೆದ ಮಂಗಳವಾರ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇಯ ಚನ್ನಪಟ್ಟಣ ಬೈಪಾಸ್‌ನ ಲಂಬಾಣಿತಾಂಡ್ಯದ ಬಳಿ ದರೋಡೆ ಮಾಡಲಾಗಿತ್ತು. ಕಾರು ನಿಲ್ಲಿಸಿ ರೆಸ್ಟ್ ಮಾಡುತ್ತಿದ್ದ ತಮಿಳುನಾಡು ಚೀರಂಬಾಡಿ ಪೊಲೀಸ್ ಠಾಣೆ ಪಿಎಸ್‌ಐ ಶಾಜಿನ್ ದಂಪತಿಗೆ ಚಾಕು ತೋರಿಸಿದ ದರೋಡೆಕೋರರು, 16 ಗ್ರಾಂ ಚಿನ್ನದ ಸರ, 10 ಸಾವಿರ ನಗದು ಹಾಗೂ ಎರಡು ಮೊಬೈಲ್ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪಿಎಸ್‌ಐ ಶಾಜಿನ್ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
