ಉದಯವಾಹಿನಿ, ಬೆಂಗಳೂರು: ಚನ್ನಪಟ್ಟಣ ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಇವತ್ತು ಬದುಕಿದ್ದೇನೆ ಅಂದರೆ ಪೊಲೀಸರೇ ಕಾರಣ ಎಂದು ಹೇಳಿ ಡಿಸಿಎಂ ಡಿಕೆಶಿವಕುಮಾರ್ ವಿರುದ್ಧ ಆರ್‌ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಆಕ್ರೋಶ ಹೊರಹಾಕಿದ್ದಾರೆ.
ಮತ್ತಿಕೆರೆ ಜೆಪಿ ಪಾರ್ಕ್‌ನಲ್ಲಿ ಡಿಕೆಶಿ ಭಾಗವಹಿಸಿದ್ದ ಬೆಂಗಳೂರು ನಡಿಗೆ ಕಾರ್ಯಕ್ರಮದಿಂದ ಹೊರಬಂದು ಮಾತನಾಡಿದ ಅವರು, ರೌಡಿಶೀಟರ್‌ಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದಾರೆ. ಅವರ ತಮ್ಮ ಸೋತಾಗಿನಿಂದ ನಾನು ಟಾರ್ಗೆಟ್ ಆಗಿದ್ದೇನೆ. ರೌಡಿಶೀಟರ್‌ಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನ ಹಿಂದೆ ನಾನು ಸುದ್ದಿಗೋಷ್ಠಿ ಮಾಡಿ ಹೇಳಿದ್ದೇನೆ. ಸುದ್ದಿಗೋಷ್ಠಿ ಬಳಿಕವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ಮಾಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮ ಆಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ ಎಂದರು.
