ಉದಯವಾಹಿನಿ, ಬೆಂಗಳೂರು: ಮತ್ತಿಕರೆಯ ಜೆಪಿ ಪಾರ್ಕ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರ ʼಬೆಂಗಳೂರು ನಡಿಗೆʼ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ವೇದಿಕೆ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಡಿಕೆಶಿವಕುಮಾರ್‌ ಅವರು ಇಂದು ವಾಕ್‌ ಮಾಡುತ್ತಾ ಜೆಪಿ ಪಾರ್ಕ್‌ಗೆ ಆಗಮಿಸಿದರು. ಆರ್‌ಎಸ್‌ಎಸ್‌ ಪಥಸಂಚಲನ ಮುಗಿಸಿದ್ದ ಶಾಸಕ ಮುನಿರತ್ನ ಸಮವಸ್ತ್ರದಲ್ಲೇ ಜನರ ಮಧ್ಯೆ ಕುಳಿತಿದ್ದರು.
ಮುನಿರತ್ನ ಅವರು ಕಾರ್ಯಕ್ರಮದಲ್ಲಿ ಕುಳಿತಿರುವುದನ್ನು ನೋಡಿದ ಡಿಕೆಶಿ ಅವರು ಕರಿ ಟೋಪಿ ಎಂಎಎಲ್ ಬಾರಪ್ಪ ಎಂದು ವೇದಿಕೆಗೆ ಆಹ್ವಾನಿಸಿದರು. ಆಹ್ವಾನಿಸಿದ ಹಿನ್ನೆಲೆಯಲ್ಲಿ ಮುನಿರತ್ನ ವೇದಿಕೆಗೆ ಹೋಗಿ ಡಿಕೆಶಿ ಬಳಿ ಮೈಕ್‌ ಕೇಳಿದರು. ಆದರೆ ಡಿಕೆಶಿ ಮೈಕ್‌ ನೀಡದೇ ಇಲ್ಲಿ ಕುಳಿತುಕೊಳ್ಳಿ ಎಂದರು. ಇದಕ್ಕೆ ಒಪ್ಪದ ಮುನಿರತ್ನ ಮೈಕ್‌ ನೀಡುವಂತೆ ಕೇಳಿದರು. ಕೊನೆಗೆ ಮುನಿರತ್ನ ಅವರು ಮೈಕ್‌ ಪಡೆದು, ಆರ್‌ಎಸ್‌ಎಸ್‌ ಪಥಸಂಚಲನ ಮುಗಿಸಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ನನಗೆ ಈ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಇಲ್ಲ. ಆದರೆ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರಣ ನಾನೊಬ್ಬ ಪ್ರಜೆಯಾಗಿ ಭಾಗವಹಿಸಿದ್ದೇನೆ ಎಂದು ಹೇಳಿ ವೇದಿಕೆಯಿಂದ ಇಳಿದು ಮತ್ತೆ ಜನರ ಮಧ್ಯೆ ಕುಳಿತರು. ಸಭಾ ಕಾರ್ಯಕ್ರಮದಲ್ಲಿ ನಿರೂಪಕರು ಮುನಿರತ್ನ ಅವರನ್ನು ಸ್ವಾಗಿಸಿ ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ವೇದಿಕೆ ಏರಿದ ಮುನಿರತ್ನ, ನಾನೊಬ್ಬ ಜನಪ್ರತಿನಿಧಿಯಾಗಿದ್ದೇನೆ ನನಗೆ ಆಹ್ವಾನ ಇಲ್ಲ. ಈ ಕ್ಷೇತ್ರದ ಸಂಸದರಿಗೂ ಆಹ್ವಾನ ಇಲ್ಲ. ಇದು ಸರ್ಕಾರಿ ಕಾರ್ಯಕ್ರಮವೇ ಅಥವಾ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಅಸಮಾಧಾನ ಹೊರಹಾಕಿದರು. ಮುನಿರತ್ನ ಆಕ್ರೋಶ ಹೊರ ಹಾಕುತ್ತಿದ್ದಂತೆ ಅಧಿಕಾರಿಗಳು ಮತ್ತು ಪೊಲೀಸರು ಮುನಿರತ್ನ ಅವರನ್ನು ಸುತ್ತುವರೆದು ಮೈಕ್‌ ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!