ಉದಯವಾಹಿನಿ, ರಾಯಚೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಪ್ಪಿದರೆ ಶಿವಸೇನೆ ಪಕ್ಷಕ್ಕೆ ಸ್ವಾಗತಿಸುತ್ತೇವೆ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿಯವರು ತಿಳಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ನಮ್ಮ ಉದ್ದೇಶ ಒಂದೇ. ಅವರ ಜೊತೆ ಮಾತುಕತೆ ನಡೆಸುತ್ತೇವೆ. ನಾಳೆ ವಿಜಯಪುರ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಆಗ ಅವರೊಂದಿಗೆ ಮಾತನಾಡುತ್ತೇವೆ. ಒಂದು ವೇಳೆ ಅವರು ಒಪ್ಪಿಕೊಂಡರೆ, ಒಂದೇ ಪ್ಲಾಟ್‌ಫಾರಂನಲ್ಲಿ ಹೋರಾಟ ಮಾಡೋಣ ಅಂದ್ರೆ ನಾವು ಸಿದ್ಧರಿದ್ದೇವೆ. ಅವರನ್ನ ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ.
ಬಿಜೆಪಿಯೂ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತದೆ. ಶಿವಸೇನೆಯೂ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತದೆ. ಶಿವಸೇನೆ, ಬಿಜೆಪಿ ಬೇರೆ ಅಲ್ಲ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರವಿದೆ. ರಾಜ್ಯದಲ್ಲಿ ಹಿಂದೂಗಳ ಮತ ಒಡೆಯದಂತೆ ಸಂಘಟನೆ ಮಾಡುತ್ತೇವೆ. ನಮ್ಮ ಶಿವಸೇನೆ ಮತ್ತು ಬಿಜೆಪಿ ಹೈಕಮಾಂಡ್ ಏನು ನಿರ್ಣಯ ಮಾಡುತ್ತದೆಯೋ ಆ ನಿಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನೂ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿಕೆ ಹರಿಪ್ರಸಾದ್, ಸಂತೋಷ್ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಧ್ಯೇಯೋದ್ದೇಶದಿಂದಲೇ ಆರ್‌ಎಸ್‌ಎಸ್ 100 ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಪ್ರಿಯಾಂಕ್ ಖರ್ಗೆಗೆ ಶೋಭೆ ತರಲ್ಲ. ಮಹಿಷಾಸುರ, ಭಸ್ಮಾಸುರ ಸೇರಿ ಹಲವರ ಹೆಸರು ಕೇಳಿದ್ವಿ. ಸರ್ಕಾರದ ಕೆಲಮಂತ್ರಿಗಳು, ಪ್ರತಿನಿಧಿಗಳು ತಮ್ಮ ಬಾಯಿ ಚಪಲಕ್ಕೆ ಚಪಲಾಸುರರಂತೆ ಹೊರಹೊಮ್ಮುತ್ತಿದ್ದಾರೆ. ಇದನ್ನು ಶಿವಸೇನೆ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
