ಉದಯವಾಹಿನಿ, ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ಸನಿಹದಲ್ಲಿದೆ. ಉಭಯ ತಂಡಗಳ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನದಾಟ ಮುಕ್ತಾಯವಾಗಿದೆ. ಗೆಲುವಿಗೆ 121 ರನ್‌ಗಳ ಗುರಿ ಬೆನ್ನತ್ತಿರುವ ಭಾರತ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ಗೆ 63 ರನ್ ಕಲೆಹಾಕಿದ್ದು, ಐದನೇ ದಿನದಾಟಕ್ಕೆ ಆಟ ಕಾಯ್ದಿರಿಸಿದೆ. ಟೀಮ್ ಇಂಡಿಯಾ ಗೆಲುವಿಗೆ 58 ರನ್‌ಗಳ ಅಗತ್ಯವಿದೆ. ಇನ್ನು ಇದರ ನಡುವೆ ಕುಲ್ದೀಪ್ ಯಾದವ್ 29 ಓವರ್ಗಳಲ್ಲಿ 104 ರನ್ ಬಿಟ್ಟುಕೊಟ್ಟಿದ್ದಾರೆ. ಆ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಮಾಡಿದ್ದಾರೆ.
ಪ್ರಥಮ ಇನಿಂಗ್ಸ್‌ನಲ್ಲಿ 85 ರನ್ ಬಿಟ್ಟು ಕೊಟ್ಟು 5 ವಿಕೆಟ್ ಕಬಳಿಸಿದ್ದರು. ಆ ಮೂಲಕ ಭಾರತ ತಂಡ ಫಾಲೋ-ಆನ್ ಜಾರಿಗೊಳಿಸಿತ್ತು. ಆದರೆ ಎಡಗೈ ಸ್ಪಿನ್ನರ್ ದ್ವಿತೀಯ ಇನಿಂಗ್ಸ್‌ನಲ್ಲಿ ನಿರಾಶದಾಯಕ ಬೌಲಿಂಗ್ ಪ್ರದರ್ಶನ ತೋರಿದರು. ನಾಯಕ ಶುಭಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್, ಕುಲ್ದೀಪ್ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಹಿಂದೆಂದೂ ಕಾಣದ ರೀತಿಯಲ್ಲಿ ಅವರು ಈ ಪಂದ್ಯದಲ್ಲಿ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ರನ್ ನೀಡುವ ಮೂಲಕ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.
ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ದೀರ್ಘ ಸ್ಪೆಲ್ ಮಾಡಿದರು. ಜಡೇಜಾ ಕೂಡ 102 ರನ್‌ಗಳನ್ನು ಸೋರಿಕೆ ಮಾಡಿದರು. ಆದರೆ ಕುಲ್ದೀಪ್ ಯಾದವ್ ಅಂತಿಮವಾಗಿ ನಾಲ್ಕನೇ ದಿನದಾಟದಲ್ಲಿ ರಾಸ್ಟನ್ ಚೇಸ್, ಖಾರಿ ಪಿಯರೆ ಮತ್ತು ಟೆವಿನ್ ಇಮ್ಲಾಚ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಇನ್ನು ಹೋಪ್ ಶತಕ ಬಾರಿಸಿ ಆಕ್ರಮಣಕಾರಿಯಾಗಿ ಬ್ಯಾಟ್ ಬಿಸುತ್ತಿದ್ದಾಗ ಮೊಹಮ್ಮದ್ ಸಿರಾಜ್ ಅವರ ಬಲೆಗೆ ಬಿದ್ದರು. ಕೆಳ ಕ್ರಮಾಂಕದ ಅಕೀಮ್ ಗ್ರೀವ್ಸ್ ಮತ್ತು ಜೇಡನ್ ಸೀಲ್ಸ್ ಹತ್ತನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟದಲ್ಲಿ ವೆಸ್ಟ್ ಇಂಡೀಸ್‌ನ ಒಟ್ಟು ಮೊತ್ತವನ್ನು 390 ಕ್ಕೆ ವಿಸ್ತರಿಸಿದರು.
