ಉದಯವಾಹಿನಿ, ವಿಶಾಖಪಟ್ಟಣಂ: ನಾಯಕಿ ಅಲಿಸ್ಸಾ ಹೀಲಿ(142) ಬಾರಿಸಿದ ಸೊಗಸಾದ ಶತಕದ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ(INDW vs AUSW) ಈ ಬಾರಿ ಮಹಿಳಾ ವಿಶ್ವಕಪ್‌ನಲ್ಲಿ(ICC Womens World Cup 2025) ಹ್ಯಾಟ್ರಿಕ್ ಗೆಲುವು ದಾಖಲಿಸಿತು. ಭಾನುವಾರ ನಡೆದ ಬೃಹತ್ ಮೊತ್ತದ ಮೇಲಾಟದಲ್ಲಿ ಭಾರತ ವಿರುದ್ಧ 3 ವಿಕೆಟ್‌ಗಳ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್ ಕೌರ್(Harmanpreet Kaur) ಪಡೆ ಸತತ 2ನೇ ಸೋಲುಂಡಿತು.
ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಅರ್ಧಶತಕ ನೆರವಿನಿಂದ 48.5 ಓವರ್‌ಗಳಲ್ಲಿ 330 ಬಾರಿಸಿತು. ಇದು ವಿಶ್ವಕಪ್‌ನಲ್ಲಿ ಭಾರತದ ಇದುವರೆಗಿನ ಅತ್ಯಧಿಕ ಮೊತ್ತ. ಇದಕ್ಕೂ ಮುನ್ನ 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 317 ರನ್ ಗಳಿಸಿತ್ತು. ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ 300 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದು ಇದೇ ಮೊದಲು.
ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಯಾವುದೇ ಒತ್ತಡಕ್ಕೆ ಸಿಲುಕದೇ ಚಾಂಪಿಯನ್ನರ ಆಟವಾಡಿ ಇನ್ನೂ 6 ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ಗೆ 331 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಮಹಿಳಾ ಏಕದಿನ ಪಂದ್ಯದಲ್ಲಿ ಇದು ಮೊದಲ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್. ಗೆಲುವಿನಿಂದಿಗೆ ಆಸೀಸ್ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿತು.
