
ಉದಯವಾಹಿನಿ,ಕೆಂಭಾವಿ: ಸರಕಾರಕ್ಕೆ ೧% ಕಟ್ಟಡ ಸೆಸ್ ಬರುವದರಿಂದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಆ ರೀತಿಯ ಯಾವುದೇ ಹಣ ಮೀಸಲಿರದೆ ಇರುವದರಿಂದ ಕೆಲವೊಂದು ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯಿಂದ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ಹೇಳಿದರು.
ಪಟ್ಟಣದ ಶಾದಿ ಮಹಲ್‌ನಲ್ಲಿ ಕೆಂಭಾವಿ ಗ್ಯಾರೇಜ ಮಾಲೀಕರ ಹಾಗೂ ಮೆಕ್ಯಾನಿಕರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರಿಗೆ ಆಗುತ್ತಿರುವ ಅನಾನುಕೂಲಗಳನ್ನು ನೂತನ ಕಾರ್ಮಿಕ ಸಚಿವರ ಗಮನಕ್ಕೆ ತರಲಾಗಿದೆ. ಮುಂಬರುವ ದಿನಗಳಲ್ಲಿ ಅವರಿಗೂ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವದು ಎಂದರು.
ಪಿಎಮ್‌ಎಸ್‌ವಾಯ್ ಸ್ಕೀಮ್‌ನಡಿ ಕಾರ್ಮಿಕರು ಪ್ರತಿ ತಿಂಗಳು ರೂ.೫೫ ಭರಿಸಿದ್ದಲ್ಲಿ ಕೇಂದ್ರ ಸರಕಾರ ರೂ.೫೫ ನೀಡುತ್ತದೆ. ೬೦ ವರ್ಷದ ನಂತರ ಸರಕಾರದಿಂದ ಅಂತಹ ಕಾರ್ಮಿಕರಿಗೆ ನಿಶ್ಚಿತವಾಗಿ ಹಾಗೂ ನಿರಂತರವಾಗಿ ಪೆನ್‌ಶನ್ ದೊರೆಯುತ್ತದೆ. ಪ್ರತಿಯೊಬ್ಬರೂ ಕಾರ್ಮಿಕ ಇಲಾಖೆಯಿಂದ ಲೈಸನ್ಸ್ ಪಡೆದುಕೊಳ್ಳಿ ಹಾಗೂ ಪುರಸಭೆ ವತಿಯಿಂದ ಅನುಮತಿ ಪಡೆದುಕೊಂಡು ಗ್ಯಾರೇಜ ಆರಂಭಿಸಿ. ಏನಾದರೂ ಅವಘಡ ಸಂಭವಿಸಿದ್ದಲ್ಲಿ ಕಾರ್ಮಿಕ ಇಲಾಖೆಯಿಂದ ಸಹಾಯಹಸ್ತ ಚಾಚಲು ಅನುಕೂಲವಾಗುತ್ತದೆ ಎಂದು ಅವರು ಸಣ್ಣ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಡಿ. ಕಾನೂನಿನ ಪ್ರಕಾರ ಅದು ಅಪರಾಧವಾಗುತ್ತದೆ. ಅಧಿಕಾರಿಗಳು ಅನೀರಿಕ್ಷತವಾಗಿ ದಾಳಿ ಮಾಡಿ ರೂ.೨೦ ಸಾವಿರದಿಂದ ೫೦ ಸಾವಿರದ ವರೆಗೆ ದಂಡ ಹಾಕಿ ಒಂದು ವರ್ಷದ ವರೆಗೆ ಜೈಲಿಗೆ ಕಳುಹಿಸಬಹುದು ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಮಾತನಾಡಿ, ಪಟ್ಟಣದ ಎಪಿಎಮ್‌ಸಿಯಲ್ಲಿ ಸುಮಾರು ೨೦ ಎಕರೆ ವಿಶಾಲವಾದ ಜಾಗವಿದೆ. ಅಲ್ಲಿ ಸಂಘಕ್ಕೆ ಅನುಕೂಲ ಕಲ್ಪಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು. ಭೀಮನಗೌಡ ಕಾಚಾಪುರ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘದ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ವಿತರಿಸಿದರು. ಉಪ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ, ಮುಖ್ಯಾಧಿಕಾರಿ ಮಲ್ಲಿಕಾರ್ಜುನ ರಾಮಸಮುದ್ರ, ಪ್ರಮುಖರಾದ ಸಂತೋಷಕುಮಾರ, ಆದಿತ್ಯ ಪೊಲೀಸ್‌ಪಾಟೀಲ, ಶಿವನಗೌಡ ಮಾಲಿಪಾಟೀಲ, ಸಂಜೀವರಾವ ಕುಲಕರ್ಣಿ, ಖಾಜಾ ಪಟೇಲ ಕಾಚೂರ, ಮಲ್ಲಪ್ಪ ಇಂಗಳಗಿ, ಸಂಘದ ಅಧ್ಯಕ್ಷ ಮಹಿಬೂಬ ಪಾಶಾ ಮುಲ್ಲಾ, ಗೌರವಾಧ್ಯಕ್ಷ ಅಮರಯ್ಯಸ್ವಾಮಿ ಹಿರೇಮಠ, ರೇವಣಸಿದ್ದ ಕುಂಬಾರ, ಮಕ್ತುಂ ಪಟೇಲ, ಶೇಕ್ ಮುಬಾರಕ ಸೇರಿದಂತೆ ಅನೇಕರಿದ್ದರು.
ಪರಶುರಾಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಶ್ರೀಶೈಲ ಕಾಚಾಪುರ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಹಿರಿಯರ ಗ್ಯಾರೇಜ್ ಮೆಕ್ಯಾನಿಕಗಳಾದ ಬಸವರಾಜ ಕಾಚಾಪೂರ.ಮಹಿಬೂಬ ಹೊಸಪೇಟ.ಮಹಿಬೂಬ ದಪೇದಾರ ಇವರನ್ನು ಸಂಘದ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
