ಉದಯವಾಹಿನಿ,ಮಾಲೂರು:– ಮಾಸ್ತಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ರೈತಪರ ಹಾಗೂ ಕೆ.ಸಿ.ಸಿ. ಮತ್ತು ಹೈನುಗಾರಿಕೆ ಸಾಲ ವಿತರಣೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮೇಲಾಧಿಕಾರಿಗಳು ಈ ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ತಾಲ್ಲೂಕು ಅಧ್ಯಕ್ಷ ಎಚ್.ಜಿ. ವೆಂಕಟೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ತಾಲ್ಲೂಕಿನ ಮಾಸ್ತಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಚ್.ಜಿ.ವೆಂಕಟೇಶ್ ಮಾತನಾಡಿ ಸಹಕಾರ ಸಂಘಗಳಿಗೆ ಹಾಲು ಪೂರೈಕೆ ಮಾಡುತ್ತಿದ್ದ ರೈತರಿಗೆ ಕೋವಿಡ್ ಸಮಯದಲ್ಲಿ ಕೆ.ಸಿ.ಸಿ (ಭೂಸ ಸಾಲ)ದ ಮೂಲಕ ಒಂದು ಹಸುವಿಗೆ 14 ಸಾವಿರ ರೂಗಳಂತೆ, ಸಾಲ ನೀಡಿ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ ಎಂದು ಹೇಳಿರುವುದು ಸರಿಯೆಷ್ಟೆ, ಈಗ ಈ ಸಾಲಕ್ಕೆ ಶೇ 10 ರಿಂದ 11 ರಷ್ಟು ಬಡ್ಡಿಯನ್ನು ಹಾಕಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ.
ಸಹಕಾರ ಸಂಘಗಳಲ್ಲಿ ಹಸುಗಳಿಗೆ ವಿಮೆ ಮಾಡಿಸಿದ್ದರೂ ಸಹ ಮತ್ತೆ ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆಯುವಾಗ ಮತ್ತೊಮ್ಮೆ ಅದೇ ಹಸುವಿಗೆ ರೂ.250೦/- ರೂಗಳಂತೆ ರೈತರಿಂದ ಹಣವನ್ನು ಪಡೆದುಕೊಳ್ಳುತ್ತಾರೆ. ಮತ್ತು ಹಸು ಸಾವನ್ನಪ್ಪಿದಾಗ ಎರಡು ವಿಮೆಯನ್ನು ರೈತರಿಗೆ ಏಕೆ ನೀಡುವುದಿಲ್ಲ. ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಸುವಿನ ಸಾಲ ಪಡೆದಿದ್ದರೆ ಅವರ ಮಕ್ಕಳ ಶಿಕ್ಷಣ ಸಹಾಯಧನ (ವಿದ್ಯಾರ್ಥಿ ವೇತನ) ಹಣವನ್ನು ಹಸುವಿನ ಸಾಲಕ್ಕೆಂದು ಜಮೆ ಮಾಡಿಕೊಳ್ಳುತ್ತಾರೆ.
ಬಂಗಾರ ಆಭರಣಗಳನ್ನು ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದ ಸಮಯದಲ್ಲಿ ಹಸುವಿನ ಸಾಲವಿದ್ದರೆ ಒಡವೆಗಳನ್ನು ನೀಡದೆ ಹಸುವಿನ ಸಾಲವನ್ನು ಮೊದಲು ಪಾವತಿ ಮಾಡಿ ಇಲ್ಲವಾದಲ್ಲಿ ನಿಮ್ಮ ಒಡವೆಗಳನ್ನು ಕೊಡುವುದಿಲ್ಲ ಎಂದು ಒತ್ತಾಯ ಮಾಡಿ ರೈತರಿಗೆ ತೊಂದರೆ ನೀಡುತ್ತಿದ್ದು, ವಿಮೆ ಕಂಪನಿಯವರು ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಇಲ್ಲವಾದಲ್ಲಿ ಸಂಘಟನೆಯೆಂದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆನರಾಬ್ಯಾಂಕ್ ಡಿ.ಎಚ್.ಆರ್.ಒ. ಶುಭಾನಾಯಕ್ ಪ್ರತಿಭಟನಾಕಾರರನ್ನು ಮನವೊಲಿಸಿ ವಿಮೆ ಕಂಪನಿಯವರ ಬಳಿ ಚರ್ಚೆ ಮಾಡಿ ರೈತರಿಗೆ ಅನ್ಯಾಯವಾಗಿದ್ದಲ್ಲಿ ಅಂತವರಿಗೆ ನ್ಯಾಯ ಕೊಡಿಸುವ ಕೆಲಸವಾಗಲಿದೆ. ಎಸ್ಸಿ, ಎಸ್ಟಿ ನಿಗಮದಿಂದ ಯಾರೇ ಅರ್ಜಿ ಸಲ್ಲಿಸಿದ್ದಲ್ಲಿ ಸೂಕ್ತ ದಾಖಲಾತಿಗಳ ಪರಿಶೀಲಿಸಿ ಸರಿಯಿದ್ದಲ್ಲಿ ಅಂತಹ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಸಿಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ನಜೀರ್ ಉಲ್ಲಾ , ತಾಲ್ಲೂಕು ಸಂಚಾಲಕ ವಿ.ವೈ.ಶ್ರೀನಾಥ್, ನೂರುದ್ದಿನ್, ಸತೀಶ್, ಜಾನಿಕಿರಾಮ್, ಕೆ.ಎಚ್.ಮುನಿಸ್ವಾಮಿ, ತಿಮ್ಮಯ್ಯ, ಬುಡ್ಡಪ್ಪ, ಬ್ಯಾಂಕ್ ವ್ಯವಸ್ಥಾಪಕ ನಾಗಿರೆಡ್ಡಿ, ಎಇಒ ಗೋಪಾಲಕೃಷ್ಣ ಹಾಜರಿದ್ದರು.
