ಉದಯವಾಹಿನಿ,ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕೆ ಎಸ್ ಆರ್ ಟಿ ಸಿ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು. ಸಚಿವ ಚೆಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ರಾಜೀನಾಮೆಗೆ ಆಗ್ರಹಿಸಿದರು. ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ” ಕೆಎಸ್ ಆರ್ ಟಿ ಸಿ ಸಿಬ್ಬಂದಿ ವರ್ಗಾವಣೆ ಬಗ್ಗೆ ಮೇಲಾಧಿಕಾರಿಯಲ್ಲಿ ಕೇಳಿದಾಗ ಸ್ಥಳೀಯ ಶಾಸಕರ ಆದೇಶ ಎಂದಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಅಧಿಕಾರಿಗಳಿಗೆ ದಿನನಿತ್ಯ ಕಿರುಕುಳ ಇದೆ ಎಂಬ ಬಗ್ಗೆ ಮಾತನಾಡುತ್ತಿದ್ದಾರೆ. ಮಂತ್ರಿಗಳ ಹೆಸರು ಉಲ್ಲೇಖ ಮಾಡಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಚಾಲಕ ಐಸಿಯುನಲ್ಲಿ ಇದ್ದಾರೆ ಸ್ಥಿತಿ ಗಂಭೀರ ಆಗಿದೆ ” ಎಂದು ವಿವರಿಸಿದರು. ರಾಜಕೀಯ ಒತ್ತಡ ಹಾಗೂ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಅಗದೇ ಇರುವುದು ಇದಕ್ಕೆ ಕಾರಣ. ಆತ್ಮಹತ್ಯೆ ಯತ್ನದ ಬಗ್ಗೆ ಯಾವುದೇ ಎಫ್ ಐ ಆರ್ ಆಗಿಲ್ಲ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಡೆತ್ ನೋಟ್ ನಲ್ಲಿ ಹೆಸರು ಇದ್ದವರ ವಿರುದ್ಧವೂ ಎಫ್ ಐ ಆರ್ ಆಗಬೇಕು. ಡೆತ್ ನೋಟ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೆಸರು ಇದೆ. ಈ ನಿಟ್ಟಿನಲ್ಲಿ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಬಸವರಾಜ ಬೊಮ್ಮಾಯಿ ಆರೋಪಕ್ಕೆ ಕಾಂಗ್ರೆಸ್ ಸದಸ್ಯ ನರೇಂದ್ರ ಸ್ವಾಮಿ ಅಕ್ಷೇಪ ವ್ಯಕ್ತಪಡಿಸಿದರು. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ಘಟನೆಯಲ್ಲಿ ಸಚಿವರ ಪಾತ್ರ ಇಲ್ಲ, ಸತ್ಯಾಸತ್ಯತೆಯ ಬಗ್ಗೆ ಬೆಳಕು ಚೆಲ್ಲಿ. ಸಚಿವರ ಪಾತ್ರ ಏನಿದೆ? ಎಂದು ಆಕ್ಷೇಪ ವ್ಯಕ್ತಪಡಿಸಿದರು.
