ಉದಯವಾಹಿನಿ,ಬೆಂಗಳೂರು: ಕೆ.ಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಮನೆ ಮೇಲೆ ನಡೆದಿದ್ದ ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ದಿನದಿಂದ ದಿನಕ್ಕೆ ಅಜಿತ್ ರೈ ಮತ್ತು ಬೇನಾಮಿ ಅಕ್ರಮ ಆಸ್ತಿ-ಪಾಸ್ತಿಗಳ ಒಳಸುಳಿಗಳು ಬಿಚ್ಚಿಕೊಳ್ಳುತ್ತಿದ್ದು, ದಾಳಿ ವೇಳೆ ಲಭ್ಯವಾದ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ದಾಖಲೆಗಳ ವಿಂಗಡಿಸುವ ಕೆಲಸವನ್ನು ಲೋಕಾಯುಕ್ತ ಅಧಿಕಾರಿಗಳು ಮುಂದುವರೆಸಿದ್ದಾರೆ. ಅಜಿತ್ ರೈ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ವೇಳೆ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಅಜಿತ್ ರೈ ದಾಳಿ ಸಂಬಂಧ ವಶಪಡಿಸಿಕೊಳ್ಳಲಾದ ದಸ್ತಾವೇಜು ದಾಖಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ಸುತ್ತಮುತ್ತಲಲ್ಲಿ ಬರೋಬ್ಬರಿ 250 ಎಕರೆಗೂ ಹೆಚ್ಚು ಜಮೀನಿನ ದಾಖಲೆಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ ಕೋಟ್ಯಂತರ ರೂಪಾಯಿಯದ್ದು ಎಂದು ಅಂದಾಜಿಸಲಾಗಿದೆ.
