ಉದಯವಾಹಿನಿ, ಶ್ರೀಶೈಲಂ: ಆಂಧ್ರಪ್ರದೇಶದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಗುರುವಾರ ಪ್ರಧಾನಮಂತ್ರಿಮೋದಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದು ಈ ಪ್ರಸಿದ್ಧ ದೇವಾಲಯಕ್ಕೆ ಮೋದಿಯವರ ಮೊದಲ ಭೇಟಿಯಾಗಿದ್ದು, ಅರ್ಚಕರು ಹಾಗೂ ದೇವಾಲಯದ ಆಡಳಿತ ಮಂಡಳಿಯವರು ಅವರನ್ನು ಶಾಸ್ತ್ರೋಕ್ತವಾಗಿ ಸ್ವಾಗತಿಸಿದ್ದಾರೆ. ಬಳಿಕ ಮೋದಿ ಅವರು ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಸ್ವಾಮಿ ವರ್ಳ ದೇವಸ್ಥಾನದಲ್ಲಿ ದೇವಿ ಭ್ರಮರಾಂಬಾ ಮತ್ತು ಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿದರು. ಈ ವೇಳ ಪ್ರಧಾನಿ ಮೋದಿಯವರೊಂದಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಉಪಸ್ಥಿತರಿದ್ದರು.
ಶ್ರೀಶೈಲಂ ದೇವಾಲಯದ ಭೇಟಿಯ ವೇಳೆ, ಮೋದಿ ಅವರು ಮಲ್ಲಿಕಾರ್ಜುನ ಸ್ವಾಮಿಗೆ ಹಸುವಿನ ಹಾಲು, ತುಪ್ಪ, ಮೊಸರು, ಜೇನುತುಪ್ಪ ಮತ್ತು ಸಕ್ಕರೆಯ ಪವಿತ್ರ ಪಂಚಾಮೃತಗಳಿಂದ ರುದ್ರಾಭಿಷೇಕ ಮಾಡಿದರು. ಸಕಲ ಪೂಜಾ ವಿಧಿಗಳನ್ನು ಪೂರ್ಣಗೊಳಿಸಿದ ಬಳಿಕ, ಅವರು ಶ್ರೀ ಶಿವಾಜಿ ಸ್ಪೂರ್ತಿ ಕೇಂದ್ರಕ್ಕೆ ಭೇಟಿ ನೀಡಿದರು. ಇದು ಛತ್ರಪತಿ ಶಿವಾಜಿ ಮಹಾರಾಜರ ಶ್ರೀಶೈಲಂ ದೈವಿಕ ಬಾಂಧವ್ಯದ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಧ್ಯಾನ ಮತ್ತು ಸ್ಮಾರಕ ಕೇಂದ್ರವಾಗಿದೆ.
ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪವಿತ್ರ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದ್ದು, ಶಿವನಿಗೆ ಸಮರ್ಪಿತವಾದ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಒಂದಾಗಿದೆ. ಅಲ್ಲದೇ ದೇವಿ ಪಾರ್ವತಿಗೆ ಮೀಸಲಾದ 52 ಶಕ್ತಿಪೀಠ(Shakti Peetha)ಗಳಲ್ಲಿ ಒಂದಾಗಿದೆ. ಇಲ್ಲಿ ಶಿವನನ್ನು ‘ಮಲ್ಲಿಕಾರ್ಜುನ ಸ್ವಾಮಿ’ ಎಂತಲೂ ಹಾಗೂ ಪಾರ್ವತಿಯನ್ನು ‘ಭ್ರಮರಾಂಭ’ ಎಂತಲೂ ಪೂಜಿಸಲಾಗುತ್ತದೆ. ಒಂದೇ ದೇವಾಲಯದ ಸಂಕೀರ್ಣದೊಳಗೆ ಜ್ಯೋತಿರ್ಲಿಂಗ ಮತ್ತು ಶಕ್ತಿಪೀಠಗಳೆರಡು ಇರುವುದು ಈ ದೇವಾಲದ ವಿಶೇಷವಾಗಿದೆ. ಇನ್ನು ಪ್ರಧಾನಿ ಮೋದಿಯವರ ಈ ದೇವಾಲಯ ಭೇಟಿಯು, ಆಂಧ್ರಪ್ರದೇಶದ ಕರ್ನೂಲ್‌(Kurnool) ಪ್ರವಾಸದ ಒಂದು ಭಾಗವಾಗಿತ್ತು. ಈ ಸಂದರ್ಭದಲ್ಲಿ ಅವರು ಮೂಲಸೌಕರ್ಯ, ವಿದ್ಯುತ್ ಸೇರಿದಂತೆ ₹13,430 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಭೂಮಿಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!