ಉದಯವಾಹಿನಿ, ನವದೆಹಲಿ: ಅಹಮದಾಬಾದ್ ವಿಮಾನ ದುರಂತಕ್ಕೆ ಸಂಬಂಧಿಸಿ ಸ್ವತಂತ್ರ ತನಿಖೆ ನಡೆಸುವಂತೆ ಕ್ಯಾಪ್ಟನ್ ಸುಮೀತ್ ಸಬರ್ವಾಲ್ (ಅವರ ತಂದೆ ಪುಷ್ಕರ್ ರಾಜ್ ಸಬರ್ವಾಲ್ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಜೂನ್ 12ರಂದು ಏರ್ ಇಂಡಿಯಾ- 171 ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿ 241 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ವಾಯುಯಾನ ತಜ್ಞರ ಸಮಿತಿಯಿಂದ ತನಿಖೆ ನಡೆಸುವಂತೆ ಪುಷ್ಕರ್ ರಾಜ್ ಸಬರ್ವಾಲ್ ಅವರು ಮನವಿ ಮಾಡಿದ್ದಾರೆ.
ಅಹಮದಾಬಾದ್‌ನಿಂದ ಜೂನ್ 12ರಂದು ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಕಾಲೇಜಿನ ವಸತಿ ಕಟ್ಟಡಕ್ಕೆ ಅಪ್ಪಳಿಸಿತ್ತು. ಓರ್ವ ಪ್ರಯಾಣಿಕನನ್ನು ಹೊರತು ಪಡಿಸಿ ವಿಮಾನದಲ್ಲಿದ್ದ ಪ್ರಯಾಣಿಕರು, ಸಿಬ್ಬಂದಿ ಸೇರಿದಂತೆ 242 ಮಂದಿ ಸಾವನ್ನಪ್ಪಿದ್ದರು.ಈ ಪ್ರಕರಣದ ತನಿಖೆ ಕುರಿತು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಇದೀಗ ದಿವಂಗತ ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಅವರ ತಂದೆ 91 ವರ್ಷದ ತಂದೆ ಪುಷ್ಕರ್ ರಾಜ್ ಸಬರ್ವಾಲ್ ಅವರು ಅಪಘಾತದ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಗುರುವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ವಾಯುಯಾನ ತಜ್ಞರ ಸಮಿತಿಯಿಂದ ಈ ತನಿಖೆ ನಡೆಸುವಂತೆ ಪುಷ್ಕರ್ ರಾಜ್ ಸಬರ್ವಾಲ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು, ಇದರಲ್ಲಿರುವ ಕೆಲವು ಅಂಶಗಳನ್ನು ಅವರನ್ನು ಪ್ರಶ್ನಿಸಿದ್ದಾರೆ. ಈ ವರದಿಯಲ್ಲಿ ಪೈಲಟ್ ದೋಷದಿಂದ ಅಪಘಾತ ಉಂಟಾಗಿದೆ ಎಂದು ಹೇಳಲಾಗಿದೆ ಎಂದು ತಿಳಿಸಿರುವ ಅವರು ಈ ಕುರಿತು ಸ್ವತಂತ್ರ ಪರಿಶೀಲನೆ ಮತ್ತು ತನಿಖೆಗೆ ಅಗತ್ಯವಿರುವ ಇತರ ಕೆಲವು ಅಂಶಗಳು ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದ ನಿಖರವಾದ ಕಾರಣವನ್ನು ಗುರುತಿಸದೆ ಅಪೂರ್ಣ ವರದಿ ಸಲ್ಲಿಸಲಾಗಿದೆ. ಇದರ ವಿಚಾರಣೆಯು ವಾಯುಯಾನ ಸುರಕ್ಷತೆಯನ್ನು ದುರ್ಬಲಗೊಳಿಸುತ್ತದೆ. ಇದು ಭಾರತದ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
