ಉದಯವಾಹಿನಿ, ಸ್ಥಿರವಾದ ಆಧಾರವನ್ನು ʻಬೆನ್ನೆಲುಬುʼ ಎಂದು ಸಂಬೋಧಿಸುವುದು ವಾಡಿಕೆ. ಬೆನ್ನೆಲುಬಿನಂಥದ್ದು ಎಲ್ಲಾ ಹಂದರಗಳನ್ನೂ ಗಟ್ಟಿಯಾಗಿ ನಿಲ್ಲಿಸಬಲ್ಲದು ಎಂಬುದು ಇದರ ಅರ್ಥವಷ್ಟೇ. ಆದರೆ ಬೆನ್ನೆಲುಬೇ ಗಟ್ಟಿಯಿಲ್ಲದಿದ್ದರೆ…? ಹೀಗಾಗುವುದಕ್ಕೂ ಖಂಡಿತ ಸಾಧ್ಯ. ಮೆದುಳಿಗೆ ಮತ್ತು ನಮ್ಮ ದೇಹದ ಇತರೆಲ್ಲ ಭಾಗಗಳಿಗೆ ಸಂವಹನ ಕಲ್ಪಿಸುವ ಕೆಲಸವೂ ಇದೆ ಬೆನ್ನೆಲುಬಿಗೆ. ಇಷ್ಟೊಂದು ಕಾರ್ಯಭಾರ ಹೊತ್ತಿರುವ ಬೆನ್ನೆಲುಬಿಗೆ ಭಾರ ಹೆಚ್ಚಾಗಿ ನೋವು, ರಿಕಿರಿ ಮತ್ತು ಅನಾರೋಗ್ಯಕ್ಕೆ ಕಾರಣ ಆಗುವುದೂ ಇದೆ. ಹಾಗಾದರೆ ನಮ್ಮ ಬೆನ್ನುಹುರಿಗೆ ತೊಂದರೆಯಾಗುವುದಕ್ಕೆ ಏನು ಕಾರಣಗಳಿವೆ? ಇದಕ್ಕೇನು ಮಾಡಬಹುದು?
ಅಸಮರ್ಪಕ ಭಂಗಿ: ಏಳುವಾಗ, ಕೂರುವಾಗ, ನಡೆಯುವಾಗ, ಬಗ್ಗುವಾಗ, ತಿರುಗುವಾಗ- ಹೀಗೆ ನಮ್ಮ ದೇಹ ಏನೇ ಚಟುವಟಿಕೆ ಮಾಡಬೇಕಿದ್ದರೂ ಬೆನ್ನು ಮೂಳೆಯ ಕ್ರಿಯೆ ಇದ್ದೇ ಇರುತ್ತದೆ. ಅದರಲ್ಲೂ ಯಾವುದೇ ಒಂದು ಭಂಗಿಯಲ್ಲಿ ದೀರ್ಘ ಕಾಲ ಇರಬೇಕೆಂದರೆ, ಅದರ ಭಂಗಿ ಸೂಕ್ತ ವಾಗಿರಬೇಕು. ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವವರು ಅದಕ್ಕೆ ಸರಿಯಾದ ಭಂಗಿಯನ್ನು ಅಳವಡಿಸಿಕೊಳ್ಳದಿದ್ದರೆ ಬೆನ್ನುಹುರಿ, ಸೊಂಟದ ಡಿಸ್ಕ್ ಅಥವಾ ಕುತ್ತಿಗೆಗೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ನಮ್ಮ ಭಂಗಿಗಳು ಸೂಕ್ತವಾಗಿದ್ದರೆ ಬೆನ್ನು ಹುರಿಯನ್ನು ನೋವಿಲ್ಲದಂತೆ ಕಾಪಾಡಿಕೊಳ್ಳಬಹುದು.
ಜೀವನಶೈಲಿ: ಜಡವಾದ ಜೀವನಶೈಲಿಯಂತೂ ಬೆನ್ನುಹುರಿಯ ಸ್ವಾಸ್ಥ್ಯದ ಮೊದಲ ಶತ್ರು. ನಮ್ಮ ಮಾಂಸಖಂಡಗಳಿಗೆ ಸರಿಯಾದ ಬಲವೃದ್ಧಿ ಇಲ್ಲದಿದ್ದರೆ, ಅವು ನಮ್ಮ ದೇಹದ ಕೀಲುಗಳನ್ನು ರಕ್ಷಿಸುವುದು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಬೆನ್ನಿಗೂ ಸರಿಯಾದ ವ್ಯಾಯಾಮ ಬೇಕು. ನಡಿಗೆ, ಈಜು, ಯೋಗ- ಇಂಥ ಯಾವುದಾದರೂ ಸರಿ. ಇವುಗಳಿಂದ ಬೆನ್ನು ಮೂಳೆಯ ಸುತ್ತಲಿನ ಮಾಂಸಖಂಡಗಳನ್ನು ಸದೃಢ ಮಾಡಬಹುದು.
