ಉದಯವಾಹಿನಿ, ಪ್ರತಿನಿತ್ಯ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದ ವಿಚಾರ. ಆರೋಗ್ಯ ಕಾಪಾಡಿಕೊಳ್ಳಲು ಜನ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುತ್ತಾರೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವಂತಹ ಒಂದು ವ್ಯಾಯಾಮವಾಗಿದೆ. ಆದರೆ ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡಲು ಎಂದಾದರೂ ಪ್ರಯತ್ನಿಸಿದ್ದೀರಾ? ಕೆಲವರಿಗಂತೂ ಅದೊಂದು ವ್ಯಾಯಾಮ ಹೌದೋ, ಅಲ್ಲವೋ ಎಂಬ ಗೊಂದಲವಿರುತ್ತದೆ. ಇನ್ನು ಕೆಲವರು ಇದೊಂದು ತಮಾಷೆಗಾಗಿ ಮಾಡುವ ವ್ಯಾಯಾಮ ಎಂದುಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಹಿಮ್ಮುಖವಾಗಿ ನಡೆಯುವುದು ತುಂಬಾ ಜನಪ್ರಿಯವಾಗುತ್ತಿದ್ದು ಇದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ. ಹಾಗಾದರೆ ಹಿಮ್ಮುಖ ನಡಿಗೆ ನಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಿಮ್ಮುಖ ನಡಿಗೆಯಿಂದ ಸಿಗುವ ಪ್ರಯೋಜನಗಳು: ಸಾಮಾನ್ಯವಾಗಿ ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈ ವ್ಯಾಯಾಮವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಸಹ ಒಪ್ಪಿಕೊಂಡಿದ್ದಾರೆ. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ರಿವರ್ಸ್ ವಾಕಿಂಗ್ ಸ್ನಾಯುಗಳನ್ನು ಬಲಪಡಿಸುತ್ತದೆ: ಸಾಮಾನ್ಯ ನಡಿಗೆಗೆ ಹೋಲಿಸಿದರೆ ಹಿಮ್ಮುಖ ನಡಿಗೆ ಅಥವಾ ರಿವರ್ಸ್ ವಾಕಿಂಗ್ ಸ್ನಾಯುಗಳು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ವ್ಯಾಯಾಮ ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಏಕಾಗ್ರತೆಯನ್ನು ಹೆಚ್ಚಿಸುತ್ತದೆ: ಈ ರಿವರ್ಸ್ ವಾಕಿಂಗ್ ವಿದ್ಯಾಭ್ಯಾಸ ಮಾಡುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ವ್ಯಾಯಾಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಿಂದಕ್ಕೆ ನಡೆಯುವಾಗ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹಾಗಾಗಿ ಅದಕ್ಕೆ ನೀಡುವ ಏಕಾಗ್ರತೆಯು ಬೀಳುವ ಭಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಇದು ಜನರನ್ನು ಮಾನಸಿಕವಾಗಿ ಬಲಶಾಲಿಗಳನ್ನಾಗಿ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಮುಂದೆ ನಡೆಯುವುದಕ್ಕಿಂತ ಹಿಂದಕ್ಕೆ ನಡೆಯುವುದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ವ್ಯಾಯಾಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲ ಕ್ಯಾಲೊರಿ ವೇಗವಾಗಿ ಕಡಿಮೆ ಆಗುವುದರಿಂದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!