ಉದಯವಾಹಿನಿ, ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಭಾರತ ಏಕದಿನ ತಂಡದ ನೂತನ ನಾಯಕ ಶುಭಮನ್‌ ಗಿಲ್‌ಗೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಶುಭಮನ್‌ ಗಿಲ್‌ ಟೆಸ್ಟ್‌ ತಂಡದ ನಾಯಕನಾಗಿ ಯಶಸ್ವಿಯಾಗಿದ್ದಾರೆ. ಆದರೆ, ಅವರು ಇನ್ನೂ ತಮ್ಮ ನಾಯಕತ್ವದಲ್ಲಿ ಕೆಟ್ಟ ದಿನಗಳನ್ನು ಅನುಭವಿಸಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕೆಟ್ಟ ಸಂದರ್ಭಗಳನ್ನು ಅವರು ಹೇಗೆ ನಿರ್ವಹಿಸಲಿದ್ದಾರೆಂದು ನೋಡಲು ಎದುರು ನೋಡುತ್ತಿದ್ದೇನೆಂದು ಅವರು ತಿಳಿಸಿದ್ದಾರೆ. ಅಕ್ಟೋಬರ್‌ 19 ರಂದು ಭಾನುವಾರ ಮೊದಲನೇ ಪಂದ್ಯದಲ್ಲಿ ಗಿಲ್‌ ಭಾರತ ತಂಡವನ್ನು ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಮುನ್ನಡೆಸಲಿದ್ದಾರೆ.
ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್‌ ಗಿಲ್‌ ಮೊದಲ ಬಾರಿ ಮುನ್ನಡೆಸಿದ್ದರು. ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ಭಾರತ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು. ನಂತರ ವೆಸ್ಟ್‌ ಇಂಡೀಸ್‌ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಒಟ್ಟು ಏಳು ಟೆಸ್ಟ್‌ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿದ್ದು, ಎರಡರಲ್ಲಿ ಸೋತಿದ್ದು, ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು.
ಇತ್ತೀಚೆಗೆ ಭಾರತ ಏಕದಿನ ತಂಡದ ನಾಯಕನಾಗುವ ಮೂಲಕ ರೋಹಿತ್‌ ಶರ್ಮಾ ಅವರ ಸ್ಥಾನವನ್ನು ಶುಭಮನ್‌ ಗಿಲ್‌ ತುಂಬಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಶುಭಮನ್‌ ಗಿಲ್‌ ಭಾರತ ತಂಡವನ್ನು 50 ಓವರ್‌ಗಳ ಸ್ವರೂಪದಲ್ಲಿ ಮುನ್ನಡೆಸಲಿದ್ದಾರೆ. ಈ ಬಗ್ಗೆ ಜಿಯೊ ಸ್ಟಾರ್‌ನಲ್ಲಿ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಮಾತನಾಡಿದ್ದಾರೆ.
“ಇದು ಇನ್ನೂ ಬಹಳ ಆರಂಭಿಕ ದಿನಗಳು- ಅವರು (ಶುಭಮನ್‌ ಗಿಲ್‌) ಇಲ್ಲಿಯವರೆಗೆ ಕೆಲವೇ ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ನಾನು ನೋಡುವ ಪ್ರಮುಖ ಗುಣವೆಂದರೆ ಒತ್ತಡ ಮತ್ತು ಕಠಿಣ ಸಂದರ್ಭಗಳನ್ನು ನಿಭಾಯಿಸುವ ಅವರ ಸಾಮರ್ಥ್ಯ. ಗಿಲ್ ಅವರ ನಾಯಕತ್ವವು ಇನ್ನೂ ಕಠಿಣವಾಗಿದೆ; ಅವರು ನಾಯಕತ್ವದ ಕೆಟ್ಟ ದಿನಗಳನ್ನು ಎದುರಿಸಿಲ್ಲ, ಅದು ಅನಿವಾರ್ಯವಾಗಿ ಬರುತ್ತದೆ. ಇದು ಅವರನ್ನು ವೈಯಕ್ತಿಕವಾಗಿ ಮತ್ತು ನಾಯಕನಾಗಿ ಪರೀಕ್ಷಿಸುತ್ತದೆ ಮತ್ತು ವಿಷಯಗಳು ಅವರ ರೀತಿಯಲ್ಲಿ ನಡೆಯದಿದ್ದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾನು ನೋಡಲು ಬಯಸುತ್ತೇನೆ,” ಎಂದು ಗಂಭೀರ್ ಜಿಯೋಸ್ಟಾರ್ ಮೂಲಕ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!