ಉದಯವಾಹಿನಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2026 ರಲ್ಲಿ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅಂದರೆ ಲೀಗ್ ಹಂತದಲ್ಲಿ ಎಲ್ಲೋ ಆರ್ಮಿಗೆ ಇನ್ನು ಉಳಿದಿರುವುದು ಕೇವಲ ಮೂರೇ ಮೂರು ಪಂದ್ಯಗಳು. ಈ ಮೂರು ಪಂದ್ಯಗಳನ್ನು ಗೆದ್ದರೂ ಸಿಎಸ್​ಕೆ ಪ್ಲೇಆಫ್​ಗೇರಬೇಕೆಂದರೆ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗಿದೆ. ಇದೆಲ್ಲದರ ನಡುವೆ ಕೋಟ್ಯಾಂತರ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಧೋನಿ (MS Dhoni) ಯಾವಾಗ ಆಡುತ್ತಾರೆ? ಎಂಬುದು. ಪ್ರಸ್ತುತ ಧೋನಿ, ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಿರುವಾಗ ಸಿಎಸ್​ಕೆ ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಾದರೂ ಧೋನಿ ಕಣಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಧೋನಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಧೋನಿ ಆರಂಭಿಕ ಕೆಲವು ಪಂದ್ಯಗಳನ್ನು ಆಡುವುದಿಲ್ಲ ಎಂದು ಫ್ರಾಂಚೈಸಿ ಹೇಳಿತ್ತು. ಆದರೀಗ ಲೀಗ್ ಹಂತ ಮುಗಿಯುವುದಕ್ಕೆ ಬಂದರೂ ಧೋನಿ ಆಡುವುದರ ಬಗ್ಗೆ ಸುಳಿವು ಸಿಕ್ಕಿಲ್ಲ. ಇದೀಗ ಧೋನಿ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿ ಸಿಕ್ಕಿದ್ದು, ಲಕ್ನೋ ವಿರುದ್ಧದ ಪಂದ್ಯಕ್ಕೆ ಧೋನಿ ತಂಡದೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಇದೆ. ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕ್ರಿಕ್‌ಬಜ್ ವರದಿ ಮಾಡಿದ್ದು, ಲಕ್ನೋಗೆ ಸಿಎಸ್​ಕೆ ತಂಡ ಪ್ರಯಾಣ ಮಾಡಲಿರುವ ಇಂಡಿಗೊ ವಿಮಾನದಲ್ಲಿ ಒಟ್ಟು 60 ಟಿಕೆಟ್‌ಗಳನ್ನು ಬುಕ್ ಮಾಡಲಾಗಿದೆ. ಈ 60 ಪ್ರಯಾಣಿಕರಲ್ಲಿ ಧೋನಿ ಕೂಡ ಸೇರಿದ್ದಾರೆ. ಅಂದರೆ ಧೋನಿ ತಂಡದೊಂದಿಗೆ ಲಕ್ನೋಗೆ ಪ್ರಯಾಣಿಸಲ್ಲಿದ್ದು, ಅಲ್ಲಿ ಅವರು ತಂಡದೊಂದಿಗೆ ಇರಲಿದ್ದಾರೆ. ಆದಾಗ್ಯೂ ಧೋನಿ ಈ ಪಂದ್ಯದಲ್ಲಿ ಆಡುತ್ತಾರಾ? ಅಥವಾ ಇಲ್ಲವಾ ಎಂಬುದು ಇನ್ನು ಖಚಿತವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!