
ಉದಯವಾಹಿನಿ , ಬೆಳಗಾವಿ: ಸಹಕಾರ ಬ್ಯಾಂಕ್ ಗದ್ದುಗೆಗಾಗಿ ಇಂದು ಚುನಾವಣೆ ನಡೆಯಲಿದ್ದು ಜಾರಕಿಹೊಳಿ ಬ್ರದರ್ಸ್ ಹಾಗೂ ಸವದಿ ಮತ್ತು ಕತ್ತಿ ಟೀಂ ಜೊತೆಗೆ ತೀವ್ರ ಕಾದಾಟಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಜಾರಕಿಹೊಳಿ ಸಹೋದರರ ವಿರುದ್ಧ ಹಿಂಬದಿಯಿಂದ ಗೇಮ್ ಪ್ಲಾನ್ ಸಿದ್ಧಪಡಿಸುತ್ತಿದ್ದ ಲಿಂಗಾಯತ ನಾಯಕರು ಈಗ ಬಹಿರಂಗವಾಗಿಯೇ ರಣಕಹಳೆ ಮೊಳಗಿಸಿದ್ದಾರೆ. ಜಾರಕಿಹೊಳಿ ಸಹೋದರರ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ (Ramesh Katti) ಹಾಗೂ ಶಾಸಕ ಲಕ್ಷ್ಮಣ ಸವದಿ ತೊಡೆ ತಟ್ಟಿ ನಾವು ಯುದ್ಧಕ್ಕೆ ಸಿದ್ಧ ಎನ್ನುವ ಸಂದೇಶ ಸಾರಿದ್ದಾರೆ. ಇಂದು ನಡೆಯಲಿರುವ ಡಿಸಿಸಿ ಬ್ಯಾಂಕ್ ಚುನಾವಣೆ ತೀವ್ರ ಕೂತಹಲ ಮೂಡಿಸಿದ್ದು ಯಾರ ಪರ ಪಿಕೆಪಿಎಸ್ ಡೆಲಿಗೇಟರ್ಸ್ ನಿಲ್ಲಲ್ಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
15 ತಾಲೂಕು ಸೇರಿ ಒಂದು ಇತರ ವಿಭಾಗದಲ್ಲಿ ನಡೆಯಲಿರುವ ಚುನಾವಣೆಯಲ್ಲಿ 8 ತಾಲೂಕು ಹಾಗೂ 1 ಅದರ್ಸ್ ವಿಭಾಗದಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆ ಆಗಿದ್ದು 7 ತಾಲೂಕುಗಳ ಚುನಾವಣೆ ನಡೆಯಲಿದೆ. ಆಯ್ಕೆ ಆಗಿರುವ 9 ಅವಿರೋಧ ಅಭ್ಯರ್ಥಿಗಳು ನಮ್ಮ ಪರವಾಗಿ ಇದ್ದು ನಮಗೆ ಡಿಸಿಸಿ ಬ್ಯಾಂಕ್ ಬಹುಮತ ಎಂದು ಜಾರಕಿಹೊಳಿ ಸಹೋದರರು ವಿಶ್ವಾಸದಲ್ಲಿದ್ದರೆ ಯಾರು ಯಾರ ಪರ ಇರಲಿದ್ದಾರೆ ಎನ್ನುವದನ್ನು ಫಲಿತಾಂಶದ ಬಳಿಕ ನೋಡೋಣ ಎಂದು ಶಾಸಕ ಲಕ್ಷ್ಮಣ ಸವದಿ ಸವಾಲು ಹಾಕಿದ್ದಾರೆ.
ಒಂದಾದ ಲಿಂಗಾಯತ ನಾಯಕರು
ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಸಭೆ ನಡೆಸಿ ಡಿಸಿಸಿ ಬ್ಯಾಂಕ್ ಅಧಿಕಾರ ತಮ್ಮ ಬಳಿ ಸೆಳೆಯುವ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಥಣಿಯಿಂದ ಲಕ್ಷ್ಮಣ ಸವದಿ, ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ, ಹುಕ್ಕೇರಿಯಿಂದ ರಮೇಶ ಕತ್ತಿ, ರಾಮದುರ್ಗದಿಂದ ಮಲ್ಲಣ್ಣ ಯಾದವಾಡ, ನಿಪ್ಪಾಣಿಯಿಂದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸೋಲಿಸಿ ಉತ್ತಮ ಪಾಟೀಲ ಆಯ್ಕೆಯಾಗುತ್ತಾರೆ.
