
ಉದಯವಾಹಿನಿ , ತಿರುವನಂತಪುರಂ: ಮಾಲೀಕನ ರಕ್ಷಣೆಗಾಗಿ ನಾಯಿಯೊಂದು ತನ್ನ ಪ್ರಾಣವನ್ನೇ ಪಣಕಿಟ್ಟ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದೆ. ಮನೆಯ ಅಂಗಳಕ್ಕೆ ಬಂದಿದ್ದ ಹಾವೊಂದು ಮಾಲೀಕ ತುಷಾರಾಗೆ ಕಚ್ಚುವುದರಲ್ಲಿತ್ತು. ಆದರೆ ಕೂಡಲೇ ಮನೆಯ ಸಾಕು ನಾಯಿ ಮುಂದೆ ಬಂದು ವಿಷಪೂರಿತ ನಾಗರಹಾವಿನೊಂದಿಗೆ ಸೆಣಸಾಡಿತು. ಈ ವೇಳೆ ಹಾವಿನ ಕಡಿತದಿಂದ ಗಾಯಗೊಂಡರೂ ಅದು ಹೋರಾಟವನ್ನು ಮುಂದುವರಿಸಿ ಕೊನೆಗೆ ಹಾವನ್ನು ಕೊಂದು ಹಾಕಿತು. ಬಳಿಕ ಕೂಡಲೇ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದು ಈಗ ಪ್ರಾಣಾಪಾಯದಿಂದ ಪಾರಾಗಿದೆ.
ಮಾಲೀಕ ತುಷಾರಾನನ್ನು ರಕ್ಷಿಸಿದ ರಾಕಿ ಎಂಬ ಸಾಕು ನಾಯಿ ಸದ್ಯ ಕೇರಳದ ಮನೆ ಮಾತಾಗಿದೆ. ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಮಾಲೀಕ ತುಷಾರನ ಮನೆಯ ಅಂಗಳದಲ್ಲಿ ಈ ಘಟನೆ ನಡೆದಿದೆ. ನಾಗರಹಾವು ಮನೆಯ ಆವರಣಕ್ಕೆ ನುಗ್ಗಿದಾಗ ತುಷಾರಾ ಮನೆಯಲ್ಲಿದ್ದರು. ಆಗ ರಾಕಿ ಹಾವಿನ ಮೇಲೆ ದಾಳಿ ಮಾಡಿ ಅದು ಮನೆಗೆ ಪ್ರವೇಶಿಸದಂತೆ ತಡೆಯಿತು. ಈ ಮಧ್ಯೆ ಅವುಗಳ ನಡುವೆ ತೀವ್ರ ಹೋರಾಟ ನಡೆದಿದ್ದು, ನಾಯಿ ನಾಗರಹಾವನ್ನು ಕೊಲ್ಲುವಲ್ಲಿ ಮತ್ತು ಮಾಲೀಕನನ್ನು ಅಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಯಿತು.
ಗಾಯಗೊಂಡ ನಾಯಿಯನ್ನು ತುಷಾರಾ ಬಳಿಕ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತುರ್ತು ಆರೈಕೆ ನೀಡಲಾಯಿತು. ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ. ಬಿಬಿನ್ ಪ್ರಕಾಶ್ ಮತ್ತು ಅವರ ತಂಡದ ಮೇಲ್ವಿಚಾರಣೆಯಲ್ಲಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಇದೀಗ ರಾಕಿ ಚೇತರಿಸಿಕೊಂಡಿದೆ.ಘಟನೆಯ ಬಗ್ಗೆ ಕೇಳಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ತುಷಾರಾ ಅವರ ಪತಿ ಸುಭಾಷ್ ಕೃಷ್ಣ ಮನೆಗೆ ಮರಳಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ರಾಕಿಯನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದರು. ರಾಕಿಯ ಧೈರ್ಯವು ಎಲ್ಲರ ಮನಸ್ಸು ಗೆದ್ದಿದೆ.
