ಉದಯವಾಹಿನಿ ,ನವದೆಹಲಿ: ಇತ್ತೀಚೆಗಿನ ಜಿಎಸ್‌ಟಿ ದರ ಕಡಿತದಿಂದಾಗಿ ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಸೇರಿದಂತೆ ಪ್ರಮುಖ ವಲಯಗಳಲ್ಲಿ ದಾಖಲೆಯ ಮಾರಾಟ ಕಂಡುಬಂದಿದ್ದು, ಜನಸಾಮಾನ್ಯರಿಗೆ ಇದರ ಪ್ರಯೋಜನಗಳು ತಲಿಪುತ್ತಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅಶ್ವಿನಿ ವೈಷ್ಣವ್ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಿಎಸ್‌ಟಿ ದರ ಕಡಿತದ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುತ್ತಿವೆ ಮತ್ತು ಕೆಲ ವಸ್ತುಗಳ ಬೆಲೆ ನಿರೀಕ್ಷೆಗಿಂತ ಕಡಿಮೆ ಆಗಿವೆ ಎಂದು ಹೇಳಿದರು.
ಜಿಎಸ್‌ಟಿ ದರ ಕಡಿತದ ಬಳಿಕ ಸರ್ಕಾರ ಗುರುತಿಸಿದ್ದ ದಿನನಿತ್ಯ ಬಳಸುವ 54 ಅಗತ್ಯ ವಸ್ತುಗಳ ಖರೀದಿ ಪ್ರಮಾಣ ಹೆಚ್ಚಿದ್ದು, ನಮ್ಮ ಉದ್ದೇಶ ಈಡೇರಿದೆ. ಜಿಎಸ್‌ಟಿ 2.0ವು ಗ್ರಾಹಕರ ಉಳಿತಾಯದ ಪ್ರಮಾಣವನ್ನು ಮೊದಲಿಗಿಂತ ಹೆಚ್ಚಿಸಿದೆ ಎಂದು ವಿತ್ತ ಸಚಿವರು ಹೇಳಿದರು.
ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಪರಿಷ್ಕರಿಸಿದ್ದ ಕೇಂದ್ರ ಸರ್ಕಾರ, ಆಹಾರ, ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ಟಿವಿ, ರೆಫ್ರಿಜರೇಟರ್‌ಗಳಂತಹ ವಸ್ತುಗಳ ಮೇಲಿನ ದರಗಳಲ್ಲಿ ತೀವ್ರ ಕಡಿತವನ್ನು ಘೋಷಿಸಿತ್ತು. ಸೆಪ್ಟೆಂಬರ್ 22ರಂದು ಜಿಎಸ್‌ಟಿ ಸುಧಾರಣೆಗಳು ಜಾರಿಗೆ ಬಂದಿದ್ದವು.
ಪರಿಷ್ಕೃತ ಜಿಎಸ್‌ಟಿ ದರ ಜಾರಿಯಾದ ಮೊದಲ ದಿನವೇ ಎಸಿ, ಟಿವಿಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದ್ದವು. ಕಾರು-ಬೈಕ್‌ಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದ್ದು, ಹೊಸ ಸುಧಾರಣೆಯಿಂದ ಹಣದುಬ್ಬರವೂ ಕಡಿಮೆ ಆಗಿದೆ. ಸ್ಮಾರ್ಟ್ ಫೋನ್‌ಗಳ ರಫ್ತಿನಲ್ಲಿ ಗಣನೀಯ ಏರಿಕೆ ಕಂಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳ ದಾಖಲೆಯ ಮಟ್ಟದಲ್ಲಿ ಮಾರಾಟ ಕಂಡಿವೆ. ನವರಾತ್ರಿಯ ಮೊದಲ ದಿನದಂದು ಜಾರಿಗೆ ತರಲಾಗಿದ್ದ ಜಿಎಸ್‌ಟಿ 2.0ವನ್ನು, ಎಲ್ಲ ನಾಗರಿಕರು ಉತ್ಸಾಹದಿಂದ ಸ್ವೀಕರಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
