ಉದಯವಾಹಿನಿ , ಲಂಡನ್: ಬ್ರಿಟಿಷ್ ನಾಗರಿಕರಿಗೆ ಆಧಾರ್ ಕಾರ್ಡ್ ಪರಿಚಯಿಸಲು ಪ್ರಧಾನಿ ಕೀರ್ ಸ್ಟಾರ್ಮರ್ ಮುಂದಾಗಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು ಭಾರತೀಯರಿಗೆ ನೀಡಲಾಗಿರುವ ಆಧಾರ್ ಐಡಿ ಕಾರ್ಡ್ ವ್ಯವಸ್ಥೆ ಬಹು ದೊಡ್ಡ ಯಶಸ್ಸು ಎಂದು ಹೊಗಳಿದ್ದರು. ಬ್ರಿಟಿಷ್ ನಾಗರಿಕರಿಗೆ ಡಿಜಿಟಲ್ ಐಡಿ ನೀಡಲು ಯೋಜನೆ ರೂಪಿಸುತ್ತಿದ್ದಾರೆ. ಬ್ರಿಟನ್‌ನ ಯೋಜಿತ ಡಿಜಿಟಲ್ ಐಡಿ ಬ್ರಿಟ್ ಕಾರ್ಡ್ ಎನ್ನುವ ಹೆಸರು ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಪ್ರವಾಸಕ್ಕಾಗಿ ಮುಂಬೈಗೆ ಬಂದಿದ್ದ ಸ್ಟಾರ್ಮರ್ ಈ ವೇಳೆ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಯುಐಡಿಎಐ ಅಧ್ಯಕ್ಷ ನಂದನ್ ನಿಲೇಕಣಿ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಭಾರತದಲ್ಲಿ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್‌ನಂತಹ ಡಿಜಿಟಲ್ ಐಡಿ ವ್ಯವಸ್ಥೆಯನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ಶಾಲಾ ಅರ್ಜಿಗಳು, ಅಡಮಾನಗಳು ಮತ್ತು ಚಾಲನಾ ಪರವಾನಗಿಗಳಿಗೆ ಅನ್ವಯಿಸುವಂತೆ ಜಾರಿಗೆ ತರಬಹುದು ಎಂದು ಹೇಳಿದ್ದರು.
ಭಾರತದಲ್ಲಿ 15 ವರ್ಷಗಳ ಹಿಂದೆ ಪರಿಚಯಿಸಲಾಗಿರುವ ಆಧಾರ್ ಕಾರ್ಡ್ ಇಂದು ಬಹುತೇಕ ಎಲ್ಲರಿಗೂ ಪ್ರಮುಖ ಗುರುತಿನ ದಾಖಲೆಯಾಗಿದೆ. ವಿವಿಧ ಕಲ್ಯಾಣ ಮತ್ತು ಸೇವೆಗಳನ್ನು ಪಡೆಯಲು ಆಧಾರ್ ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಿದರೆ, ‘ಬ್ರಿಟ್ ಕಾರ್ಡ್’ ಅಕ್ರಮ ವಲಸೆಯನ್ನು ತಡೆಯುವ ಗುರಿಯನ್ನು ಹೊಂದಿದೆ. ಆದರೂ ಗೌಪ್ಯತೆಯ ಕಾಳಜಿ ಬಗ್ಗೆ ಆತಂಕ ಕೇಳಿ ಬರುತ್ತಿದೆ.
ಏನಿದು ಬ್ರಿಟ್ ಕಾರ್ಡ್.. ?: ಅಕ್ರಮ ವಲಸೆ ನಿರ್ವಹಿಸಲು ಡಿಜಿಟಲ್ ಗುರುತಿನ ಚೀಟಿಗಳು ಕಡ್ಡಾಯ ಮಾಡಲಾಗುತ್ತದೆ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಇತ್ತೀಚೆಗೆ ಘೋಷಿಸಿದ್ದರು. 2029ರ ವೇಳೆಗೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನೇತೃತ್ವದ ಸಂಸತ್ತಿನ ಅವಧಿಯ ಅಂತ್ಯದ ವೇಳೆಗೆ ಡಿಜಿಟಲ್ ಐಡಿಗಳು ಇಂಗ್ಲೆಂಡ್‌ನಲ್ಲಿ ಕಡ್ಡಾಯ ಮಾಡುವ ಯೋಜನೆ ಹೊಂದಲಾಗಿದೆ. ಅನಿಯಮಿತ ವಲಸೆ ಬ್ರಿಟನ್‌ನ ಬಹುದೊಡ್ಡ ಸವಾಲಾಗಿದ್ದು, ಇದನ್ನು ಎದುರಿಸಲು ಇರುವುದು ಇದೊಂದೇ ದಾರಿ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಜನರು ದಕ್ಷಿಣ ಇಂಗ್ಲೆಂಡ್ ಮತ್ತು ಉತ್ತರ ಫ್ರಾನ್ಸ್ ಅನ್ನು ಬೇರ್ಪಡಿಸುವ ಕಿರಿದಾದ ಸಮುದ್ರ ದಾರಿಯಲ್ಲಿ ಸಣ್ಣ ದೋಣಿಗಳ ಮೂಲಕ ದೇಶವನ್ನು ಪ್ರವೇಶಿಸುತ್ತಿದ್ದಾರೆ.
