ಉದಯವಾಹಿನಿ, ನವದೆಹಲಿ: ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪ್ರವಾಸದ ಭಾರತ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನವನ್ನು ನೀಡಲಾಗಿಲ್ಲ. ಶಮಿ ಗಾಯದಿಂದ ಮರಳಿದ್ದಾರೆ, ಆದರೆ ಫಿಟ್ನೆಸ್ ಸಮಸ್ಯೆಗಳಿಂದಾಗಿ ಅವರನ್ನು ತಂಡದಲ್ಲಿ ಸ್ಥಾನ ಕೊಡಲು ಸಾಧ್ಯವಾಗಿಲ್ಲ. ಇದರ ನಡುವೆ ಶಮಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿ ತಮ್ಮ ಸಂಪೂರ್ಣ ಫಿಟ್ನೆಸ್ ಪ್ರದರ್ಶಿಸಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿನ ತಮ್ಮ ಅದ್ಭುತ ಪ್ರದರ್ಶನದ ನಂತರ, ಮೊಹಮ್ಮದ್ ಶಮಿ, ತಮ್ಮ ಫಿಟ್ನೆಸ್ ಬಗ್ಗೆ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ತಂಡದಿಂದ ಹೊರಗುಳಿದ ನಂತರ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ, ಆಯ್ಕೆದಾರರು ಏನೇ ಹೇಳಿದರೂ, ಅವರ ಬೌಲಿಂಗ್‌ನ ಪುರಾವೆಗಳು ಎಲ್ಲರಿಗೂ ಕಾಣುತ್ತಿವೆ ಎಂದು ಶಮಿ ಖಡಕ್‌ ಉತ್ತರ ನೀಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಉತ್ತರಾಖಂಡ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಮಿ, ಅಗರ್ಕರ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದರು. “ಅವರು ಏನು ಬೇಕಾದರೂ ಹೇಳಲಿ. ನಾನು ಹೇಗೆ ಬೌಲ್‌ ಮಾಡಿದ್ದೇನೆಂದು ನೀವು ನೋಡಿದ್ದೀರಿ. ಇದೆಲ್ಲವೂ ನಿಮ್ಮ ಕಣ್ಣ ಮುಂದೆಯೇ ಇದೆ,” ಎಂದು ಹೇಳಿದರು. ಶಮಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಅವರನ್ನು ತಂಡಕ್ಕೆ ಏಕೆ ಸೇರಿಸಿಕೊಳ್ಳಬಾರದು ಎಂಬ ಅಜಿತ್ ಅಗರ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಶಮಿ ಕಡೆಯಿಂದ ಈ ಹೇಳಿಕೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!