ಉದಯವಾಹಿನಿ, ನವದೆಹಲಿ : ದೀಪಾವಳಿ ಮೊದಲ ದಿನವೇ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿದೆ. ಕಳೆದ ಏಳು ದಿನಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಸದ್ಯ AQI 400ರ ಗಡಿ ದಾಟಿದೆ. ಮುಂದಿನ ಒಂದು ವಾರದಲ್ಲಿ ಈ ಪ್ರಮಾಣ AQI 600 ಗಡಿ ದಾಟಬಹುದು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.ದೆಹಲಿಯ 38 ಮೇಲ್ವಿಚಾರಣಾ ಕೇಂದ್ರಗಳ ಪೈಕಿ 24 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ʼತುಂಬಾ ಕಳಪೆʼ ಮಟ್ಟವನ್ನು ದಾಖಲಿಸಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಸೋಮವಾರ ಬೆಳಗ್ಗೆ, ಆನಂದ್ ವಿಹಾರ್ ನಗರದಲ್ಲಿ ಅತ್ಯಂತ ವಿಷಕಾರಿ ಗಾಳಿಯನ್ನು ವರದಿ ಮಾಡಿದೆ, AQI 417 ರೊಂದಿಗೆ, ಇದು ʼತೀವ್ರ ಕಳಪೆʼ ವರ್ಗಕ್ಕೆ ಇಳಿದಿದೆ.
ವಜೀರ್‌ಪುರ (364), ವಿವೇಕ್ ವಿಹಾರ್ (351), ದ್ವಾರಕಾ (335), ಮತ್ತು ಆರ್‌ಕೆ ಪುರಂ (323) ಸೇರಿದಂತೆ 12 ನಿಲ್ದಾಣಗಳು ಗಾಳಿಯ ಗುಣಮಟ್ಟವನ್ನು ʼತುಂಬಾ ಕಳಪೆʼ ವ್ಯಾಪ್ತಿಯಲ್ಲಿ ವರದಿ ಮಾಡಿವೆ. ಸಿಪಿಸಿಬಿ ದತ್ತಾಂಶದ ಪ್ರಕಾರ, ಸಿರಿ ಫೋರ್ಟ್, ದಿಲ್ಶಾದ್ ಗಾರ್ಡನ್ ಮತ್ತು ಜಹಾಂಗೀರ್‌ಪುರಿ ಮುಂತಾದ ಇತರ ಪ್ರದೇಶಗಳು 318 ಎಕ್ಯೂಐ ದಾಖಲಿಸಿವೆ. ಪಂಜಾಬಿ ಬಾಗ್ 313, ನೆಹರು ನಗರ 310, ಅಶೋಕ್ ವಿಹಾರ್ 305 ಮತ್ತು ಬವಾನಾ 304ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿವೆ.
ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಹಿನ್ನಲೆ GRAP ಹಂತ IIರ ನಿಯಮಗಳನ್ನು ಜಾರಿ ಮಾಡಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ II ಆಕ್ಷನ್ ಕ್ವಾಲಿಟಿ ಇಂಡೆಕ್ಸ್ (AQI) 301 ರಿಂದ 400ರವರೆಗಿನ ʼಅತ್ಯಂತ ಕಳಪೆʼ ವರ್ಗಕ್ಕೆ ಸೇರಿದಾಗ ಜಾರಿಗೊಳಿಸಲಾಗುತ್ತದೆ. ಇದು ಹಂತ I ನ ನಿಯಮಗಳನ್ನು ಸೇರಿಸಿ ಜಾರಿಯಲ್ಲಿರುತ್ತದೆ.
