ಉದಯವಾಹಿನಿ, ಅಡಿಲೇಡ್: ಮೊದಲನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ನಾಳೆ (ಅ 23) ಇಲ್ಲಿನ ಅಡಿಲೇಡ್ ಓವಲ್‌ನಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯರಿಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ. ಆದರೆ, ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಎರಡನೇ ಏಕದಿನ ಪಂದ್ಯದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಅದರಲ್ಲಿಯೂ ವಿಶೇಷವಾಗಿ ವಿರಾಟ್ ಕೊಹ್ಲಿ ಅಡಿಲೇಡ್ ಅಂಗಣದಲ್ಲಿ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇದರಲ್ಲಿ ಅವರು ಎರಡು ಶತಕಗಳೊಂದಿಗೆ 244 ರನ್‌ಗಳನ್ನು ಕಲೆ ಹಾಕಿದ್ದಾರೆ. ಒಟ್ಟಾರೆ ಈ ಅಂಗಣದಲ್ಲಿ ಅವರು ಆಡಿದ 12 ಪಂದ್ಯಗಳಿಂದ 65ರ ಸರಾಸರಿಯಲ್ಲಿ 975 ರನ್‌ಗಳನ್ನು ಗಳಿಸಿದ್ದಾರೆ.
ಇನ್ನು ಏಕದಿನ ವಿಶ್ವಕಪ್ ಟೂರ್ನಿಯವರೆಗೂ ಆಡಬೇಕೆಂದು ಬಯಸಿರುವ ರೋಹಿತ್ ಶರ್ಮಾಗೂ ಕೂಡ ಎರಡನೇ ಪಂದ್ಯ ಮುಖ್ಯವಾಗಿದೆ. ಇವರು ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಆಡಬೇಕೆಂದು ಬಯಸಿದ್ದಾರೆ. ಅಂದ ಹಾಗೆ ಮೊದಲನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಹಾಗಾಗಿ ಈ ಪಂದ್ಯವನ್ನು 26 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, 9 ವಿಕೆಟ್‌ಗಳ ನಷ್ಟಕ್ಕೆ 136 ರನ್‌ಗಳನ್ನು ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ 21.1 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 131 ರನ್‌ಗಳನ್ನು ಗಳಿಸಿ 7 ವಿಕೆಟ್‌ಗಳಿಂದ ಗೆದ್ದಿತ್ತು. ಆ ಮೂಲಕ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು.
