ಉದಯವಾಹಿನಿ, ಹೈದರಾಬಾದ್: ಟಾಲಿವುಡ್ ನಟ, ಗ್ಲೋಬಲ್‌ ಸ್ಟಾರ್‌ ರಾಮ್‍ ಚರಣ್ ಮತ್ತು ಅವರ ಪತ್ನಿ ಉಪಾಸನಾ ಕಾಮಿನೇನಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿಯ ಕ್ಷಣದ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಅತಿಥಿಗಳು ಉಡುಗೊರೆಗಳೊಂದಿಗೆ ಬಂದು ಪತ್ನಿ ಉಪಾಸನಾಗೆ ಆಶೀರ್ವಾದ ಮಾಡುತ್ತಿರುವ ಸಮಾರಂಭವನ್ನು ತೋರಿಸುವ ವಿಡಿಯೊವನ್ನು ರಾಮ್‍ಚರಣ್ ಹಂಚಿಕೊಂಡಿದ್ದಾರೆ.
ಈ ದೀಪಾವಳಿಯಂದು ದ್ವಿಗುಣಗೊಂಡ ಆಚರಣೆ, ಪ್ರೀತಿ ಮತ್ತು ಆಶೀರ್ವಾದ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೊವು ಹೊಸ ಆರಂಭ ಎಂಬ ಪದಗಳೊಂದಿಗೆ ಕೊನೆಗೊಳ್ಳುತ್ತದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹಾಗೂ ಅವರ ಪತ್ನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಎಲ್ಲರೂ ಕೂಡ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಾಮ್‍ ಚರಣ್ ಮತ್ತು ಉಪಾಸನಾ 2023ರ ಜೂನ್ 20ರಂದು ಹೈದರಾಬಾದ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ನಂತರ ಅವರು ತಮ್ಮ ಮಗಳ ನಾಮಕರಣ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದರು. ಆಕೆಗೆ ಕ್ಲಿನ್ ಕಾರ ಕೊನಿಡೇಲಾ ಎಂದು ಹೆಸರಿಡಲಾಗಿದೆ. ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ಆಯ್ಕೆ ಮಾಡಲಾಗಿದೆ. ಈ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ, ಶುದ್ಧೀಕರಣ ಶಕ್ತಿಯನ್ನು ಸೂಚಿಸುತ್ತದೆ.

Leave a Reply

Your email address will not be published. Required fields are marked *

error: Content is protected !!