ಉದಯವಾಹಿನಿ, ಅಡಿಲೇಡ್: ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿಯೂ 2 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟೀಮ್ ಇಂಡಿಯಾ ಒಡಿಐ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿತು. ಮ್ಯಾಥ್ಯೂ ಶಾರ್ಟ್ ಹಾಗೂ ಕೂಪರ್ ಕಾನೋಲಿ ಅವರ ನಿರ್ಣಾಯಕ ಅರ್ಧಶತಕಗಳ ಮೂಲಕ ಆಸ್ಟ್ರೇಲಿಯಾ ತವರು ಅಭಿಮಾನಿಗಳ ಎದುರು ಏಕದಿನ ಸರಣಿಯನ್ನು ವಶಪಡಿಸಿಕೊಂಡು ಪ್ರಾಬಲ್ಯ ಮೆರೆಯಿತು.
ಗುರುವಾರ ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 265 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, 54 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್ (74 ರನ್) ಹಾಗೂ ಕೂಪರ್ ಕಾನೋಲಿ (61 ರನ್) ಅವರ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ, 46.2 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಎರಡು ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಮ್ಯಾಟ್ ರೆನ್‌ಶಾ (30) ಹಾಗೂ ಮಿಚೆಲ್ ಒವೆನ್ (36) ಅವರು ಕೂಡ ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕೊಡುಗೆಯನ್ನು ನೀಡಿದ್ದರು.
ಈ ಪಂದ್ಯದಲ್ಲಿಯೂ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡಕ್ಕೆ ಹೊಸ ಚೆಂಡಿನಲ್ಲಿ ಬ್ಯಾಟಿಂಗ್ ನಡೆಸಲು ಕಷ್ಟವಾಗಿತ್ತು. ಆದರೆ, ಆಸ್ಟ್ರೇಲಿಯಾ ತಂಡಕ್ಕೆ ತವರು ಪಿಚ್ ನೆರವು ನೀಡಿತ್ತು. ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ (11) ಹಾಗೂ ಅಲೆಕ್ಸ್ ಕೇರಿ (9) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಸಫಲರಾದರು. ಟ್ರಾವಿಸ್ ಹೆಡ್ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶಾರ್ಟ್-ಕಾನೋಲಿ ಅರ್ಧಶತಕ
ಮ್ಯಾಥ್ಯೂ ಶಾರ್ಟ್ ಹಾಗೂ ಕೂಪರ್ ಕಾನೋಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿ ಅರ್ಧಶತಕಗಳನ್ನು ಪೂರ್ಣಗೊಳಿಸಿದರು. ಮ್ಯಾಥ್ಯೂ ಶಾರ್ಟ್ 78 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 74 ರನ್ ಗಳಿಸಿದರೆ, ಕಾನೋಲಿ 53 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಐದು ಬೌಂಡರಿಗಳೊಂದಿಗೆ ಅಜೇಯ 61 ರನ್ ಬಾರಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲ್ಲಿಸಿದರು. ಭಾರತ ತಂಡದ ಪರ ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್ ಹಾಗೂ ಅರ್ಷದೀಪ್ ಸಿಂಗ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
